UN NETWORKS
ಉಳ್ಳಾಲ: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಮಾನ್ಯತೆ ಯುಜಿಸಿ ರದ್ದುಗೊಳಿಸಿ ಎರಡು ವರ್ಷ ಕಳೆದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿರಿಸಿರುವ ಕ್ರಮವು ಖಂಡನೀಯ. ಹಾಗಾಗಿ ಶೀಘ್ರವೇ ಮಾನ್ಯತೆ ದೊರಕಿಸಿ ಕೊಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್‍ರವರು ಬೆಂಗಳೂರಿನ ಫ಼್ರೀಡಂ ಪಾರ್ಕ್ ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಆಗ್ರಹಿಸಿದರು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಒಂದು ದಿನದ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ನಿರಂಜನ್ ಆರಾದ್ಯ, “ಕೆ.ಎಸ್.ಒ.ಯು ಮಾಡಿದ ತಪ್ಪಿಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವುದು ಸರಿಯಲ್ಲ. ರಾಜ್ಯ ಸರಕಾರವು ಉನ್ನತ ನಿಯೋಗವನ್ನು ರಚಿಸಿ ಯು.ಜಿ.ಸಿಯ ಮುಂದೆ ಸಮಸ್ಯೆಯನ್ನು ಸವಿವರವಾಗಿ ತಿಳಿಸಬೇಕು. ಕೇಂದ್ರ ಸರಕಾರವು ಶೀಘ್ರದಲ್ಲಿ ಮಾನ್ಯತೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಆಗ್ರಹಿಸಿದರು.
ವಿದ್ಯಾರ್ಥಿಗಳ ಪರವಾಗಿ ಹರಿಣಿ, ಝುಬೈರ್, ಗೋಪಾಲಕೃಷ್ಣ, ನಿರ್ಮಲಾ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಕೆ.ಎಸ್.ಒ.ಯುನ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು. ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಮುಸವ್ವಿರ್, ರಾಜ್ಯ ಕಾರ್ಯದರ್ಶಿ ಸ್ವದಕತುಲ್ಲಾ, ಸಮಿತಿ ಸದಸ್ಯ ರಿಯಾಝ್, ಜಿಲ್ಲಾಧ್ಯಕ್ಷ ಮುಬಾರಕ್, ಜಿಲ್ಲಾ ಕಾರ್ಯದರ್ಶಿ ಅಬೂಬಕ್ಕರ್ ಆಸಿಫ್, ತುಮಕೂರು ಜಿಲ್ಲಾಧ್ಯಕ್ಷ ರೋಷನ್ ನವಾಝ್, ರಾಮನಗರ ಜಿಲ್ಲಾ ಕಾರ್ಯದರ್ಶಿ ಇಂಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಂಪಸ್ ಫ್ರಂಟ್ ಬೇಡಿಕೆಗಳು :
• ಮಾನ್ಯತೆಗಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೆ.ಎಸ್.ಒ.ಯು ಶೀಘ್ರವಾಗಿ ಯು.ಜಿ.ಸಿ ಜೊತೆ ಚರ್ಚಿಸಬೇಕು.
• ತಾಂತ್ರಿಕ ಕೋರ್ಸುಗಳ ಮಾನ್ಯತೆ ನೀಡುವ ಪ್ರಾಧಿಕಾರಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ , ಕೋರ್ಸುಗಳನ್ನು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಅತಂತ್ರವಾಗಿಸಿದ ಮತ್ತು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರಕ್ಕೆ ಕಾರಣರಾದ ಕೆ.ಎಸ್.ಒ.ಯು ವಿಶ್ರಾಂತ ಕುಲಪತಿ, ಕುಲಸಚಿವರು ಮತ್ತು ಇತರರನ್ನು ತನಿಖೆಗೊಳಪಡಿಸಬೇಕು ಹಾಗೂ ಎಲ್ಲಾ ವ್ಯವಹಾರಗಳ ತನಿಖೆಗಾಗಿ ಆಯೋಗವನ್ನು ರಚಿಸಬೇಕು.
• ಕೋರ್ಸುಗಳ ಅಮಾನ್ಯತೆಯಿಂದಾಗಿ ಸರ್ಕಾರಿ ಮತ್ತು ಉದ್ಯೋಗಗಳಿಂದ ಅನರ್ಹಗೊಂಡ ಅಭ್ಯರ್ಥಿಗಳ ಅನರ್ಹತೆಯನ್ನು ರದ್ದುಗೊಳಿಸಬೇಕು. ಕೆ.ಪಿ.ಎಸ್ ಮತ್ತು ಇತರ ಪರೀಕ್ಷೆಗಳ ಬರೆಯುತ್ತಿರುವ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಪರಿಗಣಿಸಬೇಕು.
• ಕೋರ್ಸುಗಳ ಅಮಾನ್ಯತೆಯಿಂದಾಗಿ ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಮುಂಭಡ್ತಿಯಿಂದ ವಂಚಿತಗೊಂಡ ಅಭ್ಯರ್ಥಿಗಳ ಭಡ್ತಿಗಾಗಿ ಶೀಘ್ರ ಕ್ರಮಕೈಗೊಳ್ಳಬೇಕು.
• ಅಮಾನ್ಯತೆಯಿಂದಾಗಿ ಹಲವು ವರ್ಷಗಳ ಕಾಲ ಉದ್ಯೋಗಗಳಿಲ್ಲದೆ ಅತಂತ್ರಗೊಂಡ ಉದ್ಯೋಗಾಕಾಂಕ್ಷಿಗಳು , ಭಡ್ತಿಯಿಲ್ಲದೆ ಪರಿತಪಿಸಿದ ಉದ್ಯೋಗಿಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು.