Site icon Ullalavani

ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಲಕ್ಷ್ಯ ಆತ್ಮನ ಸಾಕ್ಷಾತ್ಕಾರದತ್ತ ಇರಬೇಕು

 

ಉಳ್ಳಾಲ: ಮನುಷ್ಯ ಸುಖವನ್ನು ಅರಸುತ್ತಾ ಸಾಗಿದ್ದು ಇನ್ನೂ ತೃಪ್ತನಾಗಿಲ್ಲ. ಪ್ರಯಾಣದಲ್ಲಿರುವ ವ್ಯಕ್ತಿಯೊಬ್ಬ ಮಳೆ ಬರುವಾಗ ನಿಂದಿಸಿದರೆ, ಅದುವೇ ರೈತ ಹರ್ಷಗೊಳ್ಳುತ್ತಾನೆ. ಆಂಗ್ಲರು ಬ್ರೆಡ್ ತಿಂದು ಸಂತಸ ಪಟ್ಟರೆ ನಮ್ಮ ಜಿಲ್ಲೆಯವರು ಗಂಜಿ ಊಟದಲ್ಲಿ ತೃಪ್ತಿಪಟ್ಟುಕೊಳ್ಳಬಹುದು. ಹಾಗಾಗಿ ಸುಖ ಎಂಬುದು ವ್ಯಕ್ತಿ, ಸಮಾಜ, ನಾಡು, ಕಾಲ ಕಾಲಕ್ಕೆ ಬದಲಾಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು.
ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಐದನೆಯ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಲಕ್ಷ ್ಯ ಆತ್ಮನ ಸಾಕ್ಷಾತ್ಕಾರದತ್ತ ಇರಬೇಕು. ಮಗು ತಾಯಿಯ ಗರ್ಭದಿಂದ ಬಂದ ಕೂಡಲೇ ಮೂರು ಗುಣಗಳಿಂದ ಆವರಿಸಲ್ಪಡುತ್ತದೆ. ಅಕ್ಕಸಾಲಿಗನೊಬ್ಬ ಶುದ್ಧ ಅಪರಂಜಿ ಚಿನ್ನವಾದರೂ ಅದನ್ನು ಸುಂದರ ಹಾಗೂ ಗಟ್ಟಿಬಂಗಾರ ಮಾಡಲು ಅದಕ್ಕೆ ಸ್ವಲ್ಪ ತಾಮ್ರ ಸೇರಿಸುತ್ತಾನೆ. ಹಾಗೆಯೇ ಸಾತ್ವಿಕ ಗುಣ ಪೂರ್ಣ ಆವರಿಸಿದ್ದರೂ ಅದಕ್ಕೆ ಸ್ವಲ್ಪ ರಜೋಗುಣ ಸೇರಿದಾಗಲೂ ಉತ್ತಮ ಕಾರ್ಯಗಳು ಮೂಡಿಬರುತ್ತದೆ ಎಂದು ನುಡಿದರು.


ತುಳುನಾಡಿನ ಅದೆಷ್ಟೋ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಹೊರನಾಡಿನಲ್ಲಿರುವ ತುಳುವರ ಕೊಡುಗೆ ಇದೆ. ಆದರೆ ತುಳುನಾಡಿನಲ್ಲಿಯೇ ನೆಲೆಸಿದವರು ಮಾತ್ರ ತಮ್ಮೂರಿನ ವ್ಯಾಪ್ತಿಯಲ್ಲಿರುವ ದೈವ ದೇವರ ಬಗ್ಗೆ, ಕ್ಷೇತ್ರಗಳ ಕಾರಣಿಕ, ದೈವಗಳ ದೇವರುಗಳ ಕಲೆ, ಆರಾಧನೆ ವಿಶೇಷತೆ ಬಗ್ಗೆ ಅರಿತುಕೊಳ್ಳುವ ಪ್ರಯತ್ನದಲ್ಲಿ ಹಿಂದೆ ಬಿದ್ದಿದ್ದಾರೆ. ಅರಿತುಕೊಂಡರೂ ಮುಂದಿನ ತಲೆಮಾರಿಗೆ ತಿಳಿಸುವತ್ತ ಗಮನ ಹರಿಸುತ್ತಿಲ್ಲ. ಅದು ಹಾಗೆಯೇ ಮುಂದುವರಿದರೆ ನಮ್ಮ ಶ್ರೇಷ್ಠ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕಾದ ಮಕ್ಕಳು ಕಲಿಯುವುದಾದರೂ ಎಲ್ಲಿಂದ, ಹೇಗೆ ಸಾಧ್ಯ ಎಂದು ಪಡೀಲಿನ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಕೊಟ್ಟಾರಿ ಅವರು ಸಾಮಾಜಿಕ ಪರಿವರ್ತನೆಯಲ್ಲಿ ಆರಾಧನಾ ಕೇಂದ್ರ ಕುರಿತಾದ ವಿಚಾರದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಕೆ. ಚಿನ್ನಪ್ಪ ಗೌಡ ಮಾತನಾಡಿ ದೇವಸ್ಥಾನದಲ್ಲಿ ದೇವರ ನಿಂತ ಭಕ್ತ ದೇವರನ್ನು ಒಮ್ಮೆ ಕಣ್ಣು ತೆರೆದು ನೋಡಿ ಮತ್ತೊಮ್ಮೆ ಒಂದು ಕ್ಷಣ ಕಣ್ಣು ಮುಚ್ಚುತ್ತಾನೆ. ಆ ಸಂದರ್ಭ ಆತ ಎದೆಯ ಧ್ವನಿಗೆ ಓಗೊಡುತ್ತಾನೆ. ಅದರರ್ಥ ಯಾವ ವ್ಯಕ್ತಿ ಒಡಲ ದನಿಗೆ ಓಗೊಡುತ್ತಾನೆಯೋ ಅವನು ಬದುಕಿನಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಧಾರ್ಮಿಕ ಕಾರ್ಯಕ್ರಮವನ್ನು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್ ಉದ್ಘಾಟಿಸಿದರು.
ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮ್ ಮನೋಹರ್ ರೈ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕೇರಳ ಸರಕಾರ ತುಳು ಅಕಾಡೆಮಿ ಅಧ್ಯಕ್ಷ ಸುಬ್ಬಯ್ಯ ರೈ, ಸಾಗರ್ ಕನ್‍ಸ್ಟ ್ರಕ್ಷನ್ಸ್‍ನ ಗಿರಿಧರ್ ಶೆಟ್ಟಿ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಧುಕರ್ ರೈ, ಮಂಗಳೂರು ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಮಂಜಪ್ಪ, ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಗಂಗಾಧರ ಭಂಡಾರಿ ಹಾಗೂ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಎಂ.ಕಮಲಾಕ್ಷ ಪೆÇಯ್ಯಕಂಡ ಹಾಗೂ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ರವೀಂದ್ರನಾಥ ರೈ ಸ್ವಾಗತಿಸಿದರು. ಸುಖೇಶ್ ಚೌಟ ಸಾಂತ್ಯಗುತ್ತು ಕಾರ್ಯಕ್ರಮ ನಿರೂಪಿಸಿದರು. ಕೇಶವ ಕಜೆ ವಂದಿಸಿದರು. ಕಾರ್ಯಕ್ರಮದ ಬಳಿಕ ಡಾ. ವಿದ್ಯಾಭೂಷಣ ಅವರಿಂದ ಗಾನಸುಧೆ ನಡೆಯಿತು.

Exit mobile version