UN NETWORKS
ಮಂಗಳೂರು: ಕ್ರೀಡಾಪಟುಗಳಿಗೆ ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಬಾರಿ ಕಲ್ಪಿಸಿದ್ದು, ಸ್ಪರ್ಧೆಯಿಂದ ವಾಪಸ್ಸಾದ ಕೂಡಲೇ ಸ್ಪರ್ಧಾಳುಗಳಿಗೆ ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಒಂದು ವರ್ಷದವರೆಗೆ ಕಾಯಬೇಕಾದ ಅನಿವಾರ್ಯತೆಯಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಹೇಳಿದರು.
ಹಿಂದೆ ವಿದ್ಯಾರ್ಥಿ ಕ್ರೀಡಾಪಟುಗಳು ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸಿದಲ್ಲಿ, ಒಂದು ವರ್ಷದ ನಂತರ ಪರೀಕ್ಷೆಯನ್ನು ಬರೆಯುವ ಅನಿವಾರ್ಯತೆಯಿತ್ತು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತಿತ್ತು. ಅಲ್ಲದೆ ಕ್ರೀಡಾಪಟುಗಳು ಒತ್ತಡಗಳ ನಡುವೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರು ವಿ.ವಿ ನಿರ್ಣಯವನ್ನು ಕೈಗೊಂಡಿದೆ. ನಿಯಮಗಳನ್ನು ಮುಂದಿಟ್ಟುಕೊಂಡು ಮುಂದಿನ ವರ್ಷದಿಂದ ನಿಯಮವನ್ನು ಜಾರಿಗೊಳಿಸಲಾಗುವುದು ಎಂದ ಕುಲಸಚಿವರು ಮಂಗಳೂರು ವಿ.ವಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ವಲಯ ಮಟ್ಟದಲ್ಲಿ ಅಗ್ರ ಸ್ಥಾನ ಗಳಿಸಿದೆ. ತನ್ನದೇ ಇತಿಹಾಸ ದೇಶದಲ್ಲಿ ಸೃಷ್ಟಿಸಿದೆ. ಮಂಗಳೂರು ವಿ.ವಿ ಪಟಿಯಾಲ, ಪಂಜಾಬ್, ದೆಹಲಿ ವಿವಿಯ ನ್ನು ಮೀರಿಸಿದ್ದು, ಇದು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರ ಶ್ರಮ ಹಾಗೂ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ.
ವಿ.ವಿ ಕ್ರೀಡಾ ನೀತಿ ನಿಯಮಾವಳಿಯನ್ನು ರಾಜ್ಯದಲ್ಲೇ ಪ್ರಥಮವಾಗಿ ಹೊರತರುವ ಮೂಲಕ ಇತರರಿಗೆ ಮಾದರಿಯಾಗಿದ್ದು, ಈ ಮೂಲಕ ಇತರೆ ವಿ.ವಿಗಳು ಕ್ರೀಡಾ ನಿಯಮಾವಳಿಗಳನ್ನು ರಚಿಸಬೇಕೆಂಬ ಒತ್ತಾಯವನ್ನು ಮಾಡಲಾಗುತ್ತಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ವಿಶೇಷ ತರಬೇತಿಯನ್ನು ಪಡೆಯಲು ಧನಸಹಾಯವನ್ನು ವಿ.ವಿ ನಡೆಸುತ್ತಿದೆ. ಕ್ರೀಡಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಸಹನಾ ಕುಮಾರಿ, ಮಮತಾ ಕುಮಾರಿ, ಪೂವಮ್ಮ ಅವರನ್ನು ಪ್ರತಿ ತಿಂಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ವಕ್ಫ್ ಬೋರ್ಡಿನ ಸದಸ್ಯ ಹನೀಫ್ ಕೆ.ಎಂ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ವಿ.ವಿ ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜೆ.ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಡಾ.ಪಿ ದಯಾನಂದ ಪೈ-ಡಾ.ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್.ಸಿ, ಸ್ವಾಗತಿಸಿದರು. ರಥಬೀದಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ರಫೀಕ್ .ಕೆ. ವಂದಿಸಿದರು.