UN NETWORKS
ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಇಂದಿನಿಂದ ಜನವರಿ 14ರ ವರೆಗೆ ನಡೆಯುವ ಆಳ್ವಾಸ್ ವಿರಾಸತ್-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್ -ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
160 ಅಡಿ ಉದ್ದ, 60 ಅಡಿ ಅಗಲದ ವಿಶಾಲ ವೇದಿಕೆ, 50,000 ಮಂದಿ ಕುಳಿತು ಕಾರ್ಯಕ್ರಮ ಆಸ್ವಾದಿಸಬಹುದಾದ ಗ್ಯಾಲರಿ, ಮೋಹಕ ವಿದ್ಯುದ್ದೀಪಾಲಂಕಾರ, ಅತ್ಯುತ್ತಮ ಬೆಳಕು- ಧ್ವನಿ ವ್ಯವಸ್ಥೆ ವಿರಾಸತ್ ಸಂಭ್ರಮಕ್ಕೆ ಪೂರಕವಾಗಿದೆ.ವ್ಯವಸ್ಥಿತ ಪಾರ್ಕಿಂಗ್, ಖಾದ್ಯಗಳ ಮಳಿಗೆಗಳಿವೆ. ವಿದ್ಯಾರ್ಥಿ ಸ್ವಯಂಸೇವಕರು, ಮಾರ್ಗದರ್ಶಿ ಶಿಕ್ಷಕರು, ವಿವಿಧ ವಿಭಾಗಗಳ ನಿರ್ವಹಣ ಸಿಬಂದಿ, ಆಡಳಿತ ಮಂಡಳಿಯವರು ವಿರಾಸತ್ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.ಎಲ್ಲಕ್ಕೂ ಮಿಗಿಲಾಗಿ ಆಳ್ವಾಸ್ ವಿರಾಸತ್ ಸಮಯಪ್ರಜ್ಞೆ, ಶಿಸ್ತಿಗೆ ಹೆಸರಾಗಿದೆ.
ಉಚಿತ ಸಾರಿಗೆ:ಸಂಜೆ 5 ರಿಂದ ಮೂಡಬಿದಿರೆ ನಿಶ್ಮಿತಾ ಟವರ್ ಬಳಿಯಿಂದ ಪುತ್ತಿಗೆಗೆ ಮತ್ತು ಕಾರ್ಯಕ್ರಮ ಮುಗಿದ ಬಳಿಕ ಮೂಡಬಿದಿರೆಗೆ ತೆರಳಲು ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ.ಜ. 9ರಿಂದ ನಡೆದ ರಾಷ್ಟ್ರೀಯ ಚಿತ್ರಕಲಾವಿದರ ಶಿಬಿರ ಆಳ್ವಾಸ್ ವರ್ಣ ವಿರಾಸತ್-2018ರಲ್ಲಿ ಎಕ್ರಿಲಿಕ್ ಮಾಧ್ಯಮದಲ್ಲಿ ಸಿದ್ಧವಾದ ಚಿತ್ರಗಳ ಸಹಿತ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ವೀಕ್ಷಿಸಬಹುದು.