ಉಳ್ಳಾಲ: ಯುವಜನಾಂಗಕ್ಕೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾಷಾಂತರಿಸಿ, ತಾಳೆಗರಿಯಲ್ಲಿರುವ ವಿಷಯ ಸಂಕಲ್ಪಿಸಿ ಕನ್ನಡದ ಓದುಗರಿಗೆ ಸುಲಭವಾಗಿ ತಿಳಿಸುವ ಉದ್ದೇಶದಿಂದ ಧರ್ಮ ಜ್ಞಾನ ಪುಸ್ತಕವನ್ನು ರಚಿಸಲಾಗಿದೆ ಎಂದು ಲೇಖಕ, ತೀಯ ಸಮಾಜದ ಒಂದನೇ ಗುರಿಕಾರ ಪ್ರಕಾಶ್.ಎಂ.ಉಳ್ಳಾಲ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಕ್ಲಿಕ್ ಸಭಾಭವನದಲ್ಲಿ ತೊಕ್ಕೊಟ್ಟು ಬಿ.ಬಿ.ಸಿ ಪ್ರಕಾಶನದಡಿ ಮುದ್ರಣಗೊಂಡ `ಧರ್ಮ ಜ್ಞಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು ಆಚರಣೆಗಳಲ್ಲಿ ಹಲವು ನಂಬಿಕೆಗಳಿವೆ. ಅವೆಲ್ಲದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನ ಪುಸ್ತಕದಲ್ಲಿದೆ. ಹಿಂದು ಸಮಾಜೋತ್ಸವದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವುದರಿಂದ ಅಲ್ಲಿಯೂ ಪುಸ್ತಕದ ಪ್ರಚಾರ ನಡೆಯಲಿದೆ ಎಂದರು.
ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕಾರ್ಯದರ್ಶಿ ಪದ್ಮನಾಭ ಮಾಡೂರು ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ತೀಯ ಸ್ವಸಹಾಯ ಸಂಘದ ಕಾರ್ಯದರ್ಶಿ ಪವನ್ ರಾಜ್ ಕೊಲ್ಯ, ನಿತಿನ್ ರಾಜ್ ಮಾಸ್ತಿಕಟ್ಟೆ, ಉದ್ಯಮಿ ಚಂದ್ರಕಾಂತ್ ತೊಕ್ಕೊಟ್ಟು, ಸತೀಶ್ ಫನಿಕರ್, ಸುರೇಂದ್ರ ಗಂಡಿ ಉಪಸ್ಥಿತರಿದ್ದರು. ತೀಯ ಸಮಾಜದ ಉಳ್ಳಾಲ ವಲಯ ಅಧ್ಯಕ್ಷ ಎಂ.ದಿನೇಶ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.
