UN NETWORKS
ಉಳ್ಳಾಲ: ಮಸೀದಿ ಹಾಗೂ ಅಂಗಡಿಗಳಿಗೆ ಹಾನಿಗೈದು ಗಲಭೆಗೆ ಸಂಚು ರೂಪಿಸಿದ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಘಟನೆ ಖಂಡಿಸಿ ಹಾಗೂ ಕೃತ್ಯಕ್ಕೆ ಬೆಂಬಲ ನಿಂತವರ ತನಿಖೆ ನಡೆಸಿ ಅವರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಾಟೆಕಲ್ ವರ್ತಕರ ಸಂಘ ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ಪ್ರತಿಭಟನೆಯನ್ನು ಸೋಮವಾರ ನಡೆಸಿದರು.
ಸಿಸಿಟಿವಿಯಿಂದ ಪತ್ತೆ : ದುಷ್ಕೃತ್ಯ ವೇಳೆ ಇಬ್ಬರು ಚಲಿಸಿದ ಬೈಕ್‍ನ ಮಾಹಿತಿ ದೊರೆತಿದ್ದು ಅಲ್ಲದೆ ಸಿಸಿಟಿವಿಯನ್ನು ಒಡೆಯುವ ಮುನ್ನದ ದೃಶ್ಯಗಳು ಸೆರೆಸಿಕ್ಕಿದ್ದು, ಅದರ ಆಧಾರದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ತನಿಖೆ ನಡೆಸಿ ಬಳಿಕ ಬಂಧಿಸಿದ್ದಾರೆ. ಉರುಮಣೆ ನಿವಾಸಿ ಮಂಜುನಾಥ್ ಆಳ್ವ ಎಂಬವರಿಗೆ ಸೇರಿದ ನೀರಿನ ಟ್ಯಾಂಕರಿನಲ್ಲಿ ಓರ್ವ ಚಾಲಕನಾಗಿ ಇನ್ನೋರ್ವ ಪಂಪ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ನೇಮೋತ್ಸವದಲ್ಲಿ ಭಾಗವಹಿಸಿ ಮರಳುವಾಗ ಕೃತ್ಯ : ಕೊಣಾಜೆ ಸಮೀಪ ನೇಮೋತ್ಸವದಲ್ಲಿ ಭಾಗವಹಿಸಲೆಂದು ಇಬ್ಬರು ಮಾಲೀಕ ಮಂಜುನಾಥ್ ಆಳ್ವ ಅವರ ಬೈಕನ್ನು ಪಡೆದುಕೊಂಡಿದ್ದರು. ತೆರಳುವಾಗ ಮದ್ಯ ಸೇವಿಸಿದ್ದ ಈರ್ವರು, ವಾಪಸ್ಸಾಗುವಾಗಲೂ ಮದ್ಯಕ್ಕಾಗಿ ಹುಡುಕಾಡಿ ಎಲ್ಲಿಯೂ ಸಿಗದೇ ಮರಳಿ ಉರುಮಣೆ ಬಾಡಿಗೆ ಮನೆಗೆ ವಾಪಸ್ಸಾಗುತ್ತಿದ್ದರು. ದಾರಿಮಧ್ಯೆ ಕುಡಿದ ಮತ್ತಿನಲ್ಲೇ ಇಬ್ಬರು ಕೃತ್ಯ ಎಸಗಿ ಪರಾರಿಯಾಗಿದ್ದರು.
ಅಂಗಡಿ ಮುಂಗಟ್ಟು ಬಂದ್ : ಕೃತ್ಯವನ್ನು ಖಂಡಿಸಿ ಮತ್ತು ಘಟನೆಗೆ ಕಾರಣರಾದ ಮೂಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳಿಯ ವರ್ತಕರ ಸಂಘದವರು ಅಂಗಡಿ ಮುಂಗಟ್ಟು ಬಂದ್ ನಡೆಸಿ ಪ್ರತಿಭಟನೆ ನಡೆಸಿದರು. ಘಟನೆಗೆ ಇಬ್ಬರನ್ನು ಕೆಲಸಕ್ಕಿಟ್ಟ ವಾಟರ್ ಸಪ್ಲೈ ಮಾಲೀಕ ಮಂಜುನಾಥ್ ಆಳ್ವ ಅವರೇ ನೇರ ಕಾರಣ ಹಾಗೂ ಅವರ ಬೈಕನ್ನು ಉಪಯೋಗಿಸಿ ಇಬ್ಬರು ಆರೋಪಿಗಳು ದುಷ್ಕøತ್ಯ ಎಸಗಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು ಅವರನ್ನು ಬಂಧಿಸುವಂತೆ ಒತ್ತಾಯಿಸಿ ರಸ್ತೆ ತಡೆಗೆ ಮುಂದಾದರು. ಕೊಣಾಜೆ ಮತ್ತು ಉಳ್ಳಾಲ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ ರಸ್ತೆ ತಡೆ ಮಾಡದಂತೆ ನೋಡಿಕೊಂಡರು. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಮತ್ತು ಕೊಣಾಜೆ ಠಾಣಾಧಿಕಾರಿ ಅಶೋಕ್ ಅವರು ಮಂಜುನಾಥ್ ಆಳ್ವ ಅವರನ್ನು ವಶಕ್ಕೆ ಪಡೆದುಕೊಳ್ಳುವ ಭರವಸೆ ನೀಡಿದ ಬಳಿಕ ಸ್ಥಳದಿಂದ ಪ್ರತಿಭಟನಾಕಾರರು ತೆರಳಿದ್ದಾರೆ.
ಮಾಲೀಕ ವಶಕ್ಕೆ : ಆರೋಪಿಗಳಿಬ್ಬರು ಕೆಲಸ ನಿರ್ವಹಿಸುತ್ತಿದ್ದ ನೀರು ಸರಬರಾಜು ಲಾರಿ ಮಾಲೀಕ ಮಂಜುನಾಥ್ ಆಳ್ವ ಅವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್, ಮಾಧ್ಯಮ ಸಲಹೆಗಾರ ಅಬ್ಬಾಸ್ ಕಿನ್ಯಾ, ಕಾರ್ಯದರ್ಶಿ ಇಮ್ರಾನ್, ಇಸಾಕ್ ಹಾಜಿ, ಮೂಸಾ, ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಎನ್.ಎಸ್.ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಅಸೈ, ವಾದಿತೋಯ್ಬಾ ವಿದ್ಯಾ ಸಂಸ್ಥೆ ಅಧ್ಯಕ್ಷ ಅಮೀರ್ ತಂಙಳ್ , ಎಸ್ ಡಿಪಿಐ ಮುಖಂಡ ಹಾರೀಸ್ ಮಲಾರ್, ನೌಷಾದ್ ಕಲ್ಕಟ್ಟ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಸ್ಥಳದಲ್ಲಿ ಕೊಣಾಜೆ , ಉಳ್ಳಾಲ ಪೊಲೀಸರು ಹಾಗೂ ಕೆಎಸ್ ಆರ್ ಪಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.