Site icon Ullalavani

ಕಂಬ್ಳಪದವು ಬಳಿ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ

UN NETWORKS

ಉಳ್ಳಾಲ: ಬೆಂಗಳೂರು, ಧಾರವಾಡ ಬಳಿಕ ಮೂರನೆ ಜಿಲ್ಲೆಯಾಗಿ ದ.ಕ.ದಲ್ಲಿ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರವು ನಿರ್ಮಾಣವಾಗುತ್ತಿದ್ದು, ಮುಂದಿನ 18 ತಿಂಗಳಲ್ಲಿ ಈ ಕೇಂದ್ರ ಕಾರ್ಯಾಚರಿಸಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ಪಜೀರು ಗ್ರಾಮದ ಕೆಐಎಡಿಬಿ ಕಂಬ್ಳಪದವು ಬಳಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಚಾಲನಾ ತರಬೇತಿ ಕೇಂದ್ರ, ಬಂಟ್ವಾಳದಲ್ಲಿ ಆರ್‍ಟಿಒ ಕಚೇರಿ ಸೇರಿದಂತೆ ಸಾರಿಗೆ ಇಲಾಖೆಯು ದ.ಕ. ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 44 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಅದರಲ್ಲಿ ರೂ.15 ಕೋಟಿ ಯನ್ನು ಕಂಬ್ಲಪದವು ಚಾಲನಾ ತರಬೇತಿ ಕೇಂದ್ರಕ್ಕೆ ವ್ಯಯಿಸಲಾಗುತ್ತಿದೆ. ಜೀವಕ್ಕೆ ಬೆಲೆ ಕೊಡದೆ ಅನೇಕ ಅವಘಢಗಳು ಸಂಭವಿಸುತ್ತಿರುವ ಕಾಲಘಟ್ಟವನ್ನು ಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಸಾರಿಗೆ ಇಲಾಖೆ ರಸ್ತೆ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಹೆಚ್ಚಿನ ಕ್ರಮಕೈಗೊಳ್ಳುತ್ತಿದೆ.

ಸರಕಾರದ ವತಿಯಿಂದ ಮಹಿಳೆಯರಿಗೆ ಘನ ವಾಹನಗಳ ತರಬೇತಿಯನ್ನು ಕೊಡಿಸಿ, ಪರವಾನಿಗೆಯನ್ನು ಒದಗಿಸಿ ಸಾರ್ವಜನಿಕ ಸಾರಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಚಿಂತನೆ ಇಲಾಖೆ ಮುಂದಿದೆ. ಮುಂದಿನ ಬಜೆಟ್‍ನಲ್ಲಿ ಇದಕ್ಕಾಗಿ ಅನುದಾನವನ್ನೂ ಕಾದಿರಿಸಲಾಗು ವುದು. ವಿದೇಶಗಳಲ್ಲಿ ಘನವಾಹನಗಳನ್ನು ಮಹಿಳೆಯರು ಚಲಾಯಿಸುತ್ತಾರೆ. ನಮ್ಮ ರಾಜ್ಯದಲ್ಲಿಯೂ ಅದಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಘನ ವಾಹನಗಳ ಚಾಲಕರಾಗಿ ಸದೃಢ ಮಹಿಳೆಯರಿಗೆ ಸರಕಾರದಿಂದ ಉಚಿತವಾಗಿ ತರಬೇತಿ ಒದಗಿ ಪರವಾನಿಗೆ ನೀಡಲು ಕ್ರಮ ವಹಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆಯಾಗಲಿದೆ ಎಂದ ಸಚಿವ ರೇವಣ್ಣ ಅವರು ದೇಶದಲ್ಲಿಯೇ ಕರ್ನಾಟಕದ ಸಾರಿಗೆ ವ್ಯವಸ್ಥೆ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ ಎಂದರು. ರೈತ ಸಾರಥಿ ಕಾರ್ಯಕ್ರಮಮದಡಿ ರೈತರಿಗೆ ಟ್ರಾಕ್ಟರ್ ಚಾಲನಾ ಪರವಾನಿಗೆಯನ್ನು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಐದು ಲಕ್ಷ ಟ್ರಾಕ್ಟರ್‍ಗಳಿದ್ದು, 3 ಲಕ್ಷ ಮಂದಿ ಮಾತ್ರ ಚಾಲನಾ ಪರವಾನಿಗೆ ಹೊಂದಿದ್ದಾರೆ. ಇದರಿಂದಾಗಿ ಅಪಘಾತ ಆದಾಗ ಚಾಲನಾ ಪರವಾನಿಗೆ ಇಲ್ಲದಿದ್ದಲ್ಲಿ ಸೌಲಭ್ಯಗಳು ಸಿಗುವುದಿಲ್ಲ. ಅದಕ್ಕಾಗಿ ಸರಕಾರವೇ ಟ್ರಾಕ್ಟರ್ ಚಾಲನಾ ತರಬೇತಿ ನೀಡಿ ಉಚಿತವಾಗಿ ಪರವಾನಿಗೆಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

                                       ಜಾಹೀರಾತು

ತಿಂಗಳಾಂತ್ಯಕ್ಕೆ ಬಂಟ್ವಾಳ ಆರ್‍ಟಿಒ ಕಚೇರಿ ಉದ್ಘಾಟನೆ: ಸಚಿವ ರೈ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬಂಟ್ವಾಳದಲ್ಲಿ ಆರ್‍ಟಿಒ ಕಚೇರಿಗೆ ಹಣಕಾಸು ಇಲಾಖೆ ಅನುಮೋದನೆ ದೊರಕಿದ್ದು, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆಗೊಳ್ಳಲಿದೆ. ಇದರಿಂದ ಬೆಳ್ತಂಗಡಿ ಮತ್ತು ಬಂಟ್ವಾಳದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪಜೀರು ಗ್ರಾಮದ ಅಭಿವೃದ್ಧಿಯಾಗಿದೆ: ಸಚಿವ ಖಾದರ್
ಪಜೀರು ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರವು ಮುಡಿಪು ಹಾಗೂ ಸುತ್ತಮುತ್ತಲಿನ ಪ್ರದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದರು.

ಈ ಪ್ರದೇಶದಲ್ಲಿ ಮುಂದಿನ ಗುರಿ ಸಮಗ್ರ ಕುಡಿಯುವ ನೀರಿನ ಯೋಜನೆಯದ್ದಾಗಿದ್ದು, ಈ ನಿಟ್ಟಿನಲ್ಲಿ ಹರೇಕಳದಿಂದ ಅಡ್ಯಾರ್‍ವರೆಗೆ ಬ್ಯಾರೇಜ್ ನಿರ್ಮಿಸಿ 170 ಕೋಟಿ ರೂ. ವೆಚ್ಚದಲ್ಲಿ ನೀರು ಸಂಗ್ರಹ ಮಾಡುವ ಕಾರ್ಯ ನಡೆಯಲಿದೆ. ಇದರಿಂದ ಈ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ರೈತರಿಗೆ ಟ್ರಾಕ್ಟರ್ ಚಾಲನಾ ಪರವಾನಿಗೆಯನ್ನು ಸಚಿವ ರೇವಣ್ಣ ವಿತರಿಸಿದರು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಮಂಗಳೂರು ತಾ.ಪಂ. ಅಧ್ಯಕ, ಮುಹಮ್ಮದ್ ಮೋನು, ಪಜೀರು ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಟಿ.ಕೆ. ಸುಧೀರ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಯುಕ್ತ ಬಿ. ದಯಾನಂದ, ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದ ಸಮೀಪದ 10 ಎಕರ ಪ್ರದೇಶದಲ್ಲಿ ಅಟೋಮ್ಯಾಟೆಡ್ ವಾಹನ ತಪಾಸಣೆ ಮತ್ತು ಪ್ರಮಾಣೀಕರ ಕೇಂದ್ರ ಹಾಗೂ ಪರೀಕ್ಷಾ ಪಥ ನಿರ್ಮಾಣ ಕಾಮಗಾರಿ ಸುಮರು 28 ಕೋಟಿ ರೂ. ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

Exit mobile version