UN NETWORKS
ತಲಪಾಡಿ : ತಲಪಾಡಿ ಶಾಲೆಯಿಂದ ತೆರಳುವ ಸಂದರ್ಭ ಕೆ.ಸಿ.ರೋಡಿನಲ್ಲಿ ಯುವಕರ ತಂಡವೊಂದು ನಿಂತು ಮೊಬೈಲ್ ನಂಬರ್ ಕೊಡುವಂತೆ ಪೀಡಿಸುತ್ತಿದ್ದು, ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಹೆದರಿಕೆಯಾಗುತ್ತಿದೆ ಎಂದು ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳು ಆರೋಪಿಸಿದ ಘಟನೆ ತಲಪಾಡಿಯಲ್ಲಿ ನಡೆದಿದೆ.
ತಲಪಾಡಿ ಗ್ರಾಮ ಪಂಚಾಯಿತಿ ಶುಕ್ರವಾರ ಗ್ರಾಮಸೌಧ ತಲಪಾಡಿಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಆರೋಪಿಸಿದ್ದಾಳೆ.
ನಿತ್ಯ ತಲಪಾಡಿಯಿಂದ ಶಾಲೆ ಬಿಟ್ಟು ಮನೆಗೆ ವಾಪಸ್ಸಾಗುವ ಸಂದರ್ಭ ಕೆ.ಸಿ.ರೋಡ್ ಜಂಕ್ಷನ್ ಸಮೀಪ ಕೆಲ ಯುವಕರ ತಂಡ ನಿಂತು ಮೊಬೈಲ್ ನಂಬರನ್ನು ಕೇಳುವುದಲ್ಲದೆ, ಅಶ್ಲೀಲ ಸನ್ನೆಯನ್ನು ಮಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಹೆದರಿಕೆಯಾಗುತ್ತಿದೆ. ಈ ಬಗ್ಗೆ ಪಂಚಾಯಿತಿನವರು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಗಮನಹರಿಸಿ , ವಿದ್ಯಾರ್ಥಿಗಳು ನಿರ್ಭೀತಿಯಿಂದ ಶಾಲೆಯಿಂದ ವಾಪಸ್ಸಾಗುವಂತೆ ವಾತಾವರಣ ನಿರ್ಮಿಸಿ ಕೊಡಬೇಕಿದೆ ಎಂದು ಒತ್ತಾಯಿಸಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿದ ತಲಪಾಡಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ತಿಳಿಸಿ, ವಿದ್ಯಾರ್ಥಿನಿ ಉಪಟಳ ನೀಡುತ್ತಿರುವ ತಂಡದ ಗುರುತುಪರಿಚಯವಿದ್ದಲ್ಲಿ ಶಾಲಾ ಶಿಕ್ಷಕಿ ಜತೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಬಡತನದಿಂದ ಶಾಲೆಗೆ ಬರಲಾಗುತ್ತಿಲ್ಲ !
ತಲಪಾಡಿ ಪಟ್ನ ಸರಕಾರಿ ಪ್ರೌಢಶಾಲೆಯ 10ನೇ ಕಲಿಯುತ್ತಿದ್ದ ವಿದ್ಯಾರ್ಥಿಯೋರ್ವ ಮನೆಯಲ್ಲಿರುವ ಬಡತನದಿಂದ ಶಾಲೆಗೆ ಬರಲು ಸಾಧ್ಯವಾಗದೆ, ಕುಟುಂಬ ನಿರ್ವಹಣೆಗೆ ಕೇರಳ ಭಾಗದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಪಂಚಾಯಿತಿ ಈತನ ಮನೆಮಂದಿಗೆ ಸಹಾಯ ಮಾಡಿ ವಿದ್ಯಾರ್ಥಿಯನ್ನು ಮತ್ತೆ ಶಾಲೆಗೆ ಬರುವಂತೆ ಮಾಡಬೇಕಿದೆ ಎಂದು ಸಹಪಾಠಿ ವಿದ್ಯಾರ್ಥಿನಿ ನಿಷ್ಮಾ ಗ್ರಾಮಸಭೆಯಲ್ಲಿ ಒತ್ತಾಯಿಸುವ ಮೂಲಕ ಗಮನ ಸೆಳೆದಳು. ಶಾಲಾ ಮುಖ್ಯೋಪಾಧ್ಯಾಯಿನಿಯವರು ಮಾತನಾಡಿ ವಿದ್ಯಾರ್ಥಿ ಮನೆಗೆ ಹಲವು ಭಾರಿ ಭೇಟಿ ನೀಡಿ ಹೆತ್ತವರಲ್ಲಿ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲಾಗಿದೆ. ಆದರೂ ಹೆತ್ತವರು ಶಾಲೆಗೆ ಕಳುಹಿಸಲು ಹೆಚ್ಚಿನ ಒಲವು ತೋರದೇ ಇರುವುದರಿಂದ ವಿದ್ಯಾರ್ಥಿ ಶಾಲೆಗೆ ಬರುತ್ತಿಲ್ಲ. ಕಲಿಯುವುದರಲ್ಲಿಯೂ ಉತ್ತಮ ಅಂಕವನ್ನು ಪಡೆಯುತ್ತಿದ್ದ , ಶಾಲೆ ಕಲಿತಲ್ಲಿ ಉನ್ನತ ವ್ಯಾಸಾಂಗವನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಪಂಚಾಯಿತಿ ಗಮನಹರಿಸಿದಲ್ಲಿ ವಾಪಸ್ಸು ಶಾಲೆಗೆ ಬರಲು ಸಾಧ್ಯ ಎಂದರು.
ವಾಹನದಿಂದ ರಸ್ತೆ ದಾಟಲು ಅಡ್ಡಿ : ತಲಪಾಡಿ ಚೆಕ್‍ಪೋಸ್ಟ್ ಸಮೀಪ ಲಾರಿಗಳು ಅಡ್ಡಾದಿಡ್ಡಿ ನಿಲ್ಲಿಸುವುದಲ್ಲದೆ, ಝೀಬ್ರಾ ಕ್ರಾಸ್ ಅಳವಡಿಸಲಾಗಿದ್ದರೂ ಅತಿವೇಗವಾಗಿ ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಹಿಂದಿನ ಗ್ರಾಮಸಭೆಯಲ್ಲೂ ಈ ಸಮಸ್ಯೆ ಬಗ್ಗೆ ತಿಳಿಸಲಾಗಿತ್ತು. ಆದರೂ ರಸ್ತೆ ದಾಟಿ ಶಾಲೆಗೆ ಬರಲು ಅಸಾಧ್ಯವಾಗುತ್ತಿದೆ ಎಂದು ಪಟ್ನ ಶಾಲೆ ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಕ್ರಿಯಿಸಿದ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಹಿಂದೆ ಕೈಗೊಂಡ ನಿರ್ಣಯದಂತೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ವೇಳೆ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಆದರೂ ತೊಂದರೆ ನಿವಾರಣೆಯಾಗದಿದ್ದಲ್ಲಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಬಸ್ಸುಗಳ ಅವ್ಯವಸ್ಥೆಯಿಂದ ತಲಪಾಡಿ ಅನುದಾನಿತ ದುರ್ಗಾಪರಮೇಶ್ವರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಲಾ ವಿದ್ಯಾರ್ಥಿನಿ ಶಿವಾನಿ ಆರೋಪಿಸಿದರು. ಬೆರಳೆಣಿಕೆಯ ಬಸ್ಸುಗಳು ಮಾತ್ರ ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ದೂರದ ಅಡ್ಕ, ಮಂಡೆಕಟ್ಟದಿಂದ ಬರುವ ವಿದ್ಯಾರ್ಥಿಗಳು ರಿಕ್ಷಾ ಮಾಡಿಕೊಂಡು ಶಾಲೆಗೆ ಬರಬೇಕಿದೆ ಎಂದು ದೂರಿದರು. ತಲಪಾಡಿ ಪಟ್ನ ಶಾಲೆಯಲ್ಲಿ ಇಂಗ್ಲೀಷ್ ಭಾಷೆಗೆ ಶಿಕ್ಷಕಿಯ ಕೊರತೆಯಿದೆ, ಆಟವಾಡಲು ಮೈದಾನದ ಕೊರತೆಯಿದ್ದು, ಇಂಗು ಗುಂಡಿ ಮತ್ತು ಕಸ ಹಾಕಲು ಕಾಂಪೋಸ್ಟ್ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿಗಳು ಸೂಚಿಸಿದರು.
ಕಾಲೇಜು ಹೈಸ್ಕೂಲ್ ನಿರ್ಮಾಣಗೊಳ್ಳಲಿದೆ : ತಲಪಾಡಿ ಪಟ್ನ ಶಾಲೆಯಲ್ಲಿ ಪ್ರಾಥಮಿಕ ಶಾಲೆ ನಡೆಸಲು ಮಾತ್ರ ಅವಕಾಶವಿದ್ದು ಆದರೆ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಪ್ರೌಢಶಾಲೆಯನ್ನು ಅಲ್ಲೇ ನಿರ್ಮಿಸಲಾಗಿತ್ತು. ಇದರಿಂದ ಸ್ಥಳದ ಕೊರತೆಯಿದೆ. ಈ ನಿಟ್ಟಿನಲ್ಲಿ ನಾರ್ಲಪಡೀಲು ಪ್ರದೇಶದ 3.5 ಎಕರೆ ಸರಕಾರಿ ಜಾಗದಲ್ಲಿ ಸರಕಾರಿ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಿರ್ಮಿಸುವ ಪ್ರಸ್ತಾವನೆ ಇದ್ದು, ಶೀಘ್ರವೇ ಅನುದಾನ ಬಿಡುಗಡೆಯಾದಲ್ಲಿ ಸುಸಜ್ಜಿತ ಆಟದ ಮೈದಾನದ ಜತೆಗೆ ಎಲ್ಲಾ ವ್ಯವಸ್ಥೆಯ ಜತೆಗೆ ಶಾಲೆ ಮತ್ತು ಕಾಲೇಜು ಕಾರ್ಯಾಚರಿಸಲಿದೆ ಎಂದರು.
ಮಕ್ಕಳ ಸಹಾಯವಾಣಿಯ ಯೋಗೀಶ್ ಮಲ್ಲಿಗೆಮಾಡು ಮಾತನಾಡಿ ಪ್ರಸ್ತುತ ಸಮಾನವಾದ ಪ್ರೀತಿಯನ್ನು ಮಕ್ಕಳಿಗೆ ನೀಡುವಲ್ಲಿ ಹೆತ್ತವರು ಮತ್ತು ಶಿಕ್ಷಕರು ವಿಫಲರಾಗಿದ್ದಾರೆ. ದೈಹಿಕ ಹಿಂಸೆಯಿಂದ ಮಕ್ಕಳನ್ನು ಸರಿಪಡಿಸಲು ಸಾಧ್ಯವಿಲ್ಲ. ಬುದ್ಧಿ ಮಾತಿನಿಂದ ಸರಿಪಡಿಸಲು ಸಾಧ್ಯ. ಬಾಲಕಿಯರು ಲೈಂಗಿಕ ಶೋಷಣೆಗಳಿಗೆ ಒಳಗಾಗುತ್ತಿರುವಂತೆ ಬಾಲಕರು ಕೂಡಾ ಶೋಷಣೆಗೊಳಗಾಗುತ್ತಿದ್ದಾರೆ. ಆದರೆ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿಲ್ಲ. ಪಂಚಾಯತ್ ಗಳಲ್ಲಿ ಮಕ್ಕಳ ಸಂರಕ್ಷಣಾ ಸಮಿತಿ ಕ್ರಿಯಾಶೀಲವಾಗಿದ್ದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯ ಎಂದರು.
ಸಭೆಯಲ್ಲಿ ತಲಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ವiಕ್ಕಳ ಪ್ರತಿನಿಧಿಯಾಗಿ ಮಹಮ್ಮದ್ ರಿಫಾಜ್ ಮತ್ತು ಅನನ್ಯಾ ಕುಲಾಲ್, ತಲಪಾಡಿ ಪಟ್ನ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ದೇವಿಪುರ ಸ.ಹಿ.ಪ್ರಾ.ಶಾಲೆಯ ಸುಜಾತ, ಆರೋಗ್ಯಾಧಿಕಾರಿ ಗೋಪಿ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾರದ, ಸ.ಪ್ರೌ.ಶಾಲೆ ಪಟ್ನದ ಮುಖ್ಯಶಿಕ್ಷಕಿ ಶರ್ಮಿಳಾ ಉಚ್ಚಿಲ್, ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ನಿರೂಪಿಸಿದರು. ಶಾಂತಿ ವಂದಿಸಿದರು.