Site icon Ullalavani

ಮಂಕಿಸ್ಟ್ಯಾಂಡ್ ಸಹಚರನ ಹತ್ಯೆ ವಿದ್ಯಾರ್ಥಿ ಸಹಿತ 6 ಮಂದಿ ಬಂಧನ

UN NETWORKS

ಮಂಗಳೂರು : ನಗರದ ಗೋರಿಗುಡ್ಡ 4ನೆ ಅಡ್ಡ ರಸ್ತೆಯ ನಿವಾಸಿ ಮೆಲ್ರಿಕ್ ಅಂತೋನಿ ಡಿಸೋಜ (21) ಎಂಬಾತನನ್ನು ಡಿ. 25ರಂದು ಮಾರಕಾಸ್ತ್ರದಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು 6 ಮಂದಿ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಗೋರಿಗುಡ್ಡ ವೆಲೆನ್ಸಿಯಾದ ನಿಶಾಕ್ ಪೂಜಾರಿ ಯಾನೆ ನಿಶಾಕ್ (28), ಗೋರಿಗುಡ್ಡ ನೆಹರೂ ರಸ್ತೆಯ ವಿನೇಶ್ ಕುಮಾರ್ (30), ಮುಳಿಹಿತ್ಲು ಟೈಲರ್ ರೋಡ್‌ನ ಸಚಿನ್ ಶೆಟ್ಟಿ ಯಾನೆ ಸಚಿನ್ (22), ಜಪ್ಪಿನಮೊಗರು ತಂದೊಳಿಗೆಯ ಗಣೇಶ್ ಕುಲಾಲ್ ಯಾನೆ ಗಣೇಶ್ ಯಾನೆ ಗಂಟೆ (34), ಕಂಕನಾಡಿಯ ಗೋರಿಗುಡ್ಡೆ ನೆಕ್ಕರೆಮಾರ್‌ನ ಪ್ರವೀಣ್ ಪೂಜಾರಿ (42), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (33) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ ಮತ್ತು ಮೊಬೈಲ್ ಸಹಿತ 2 ಬೈಕ್ ವಶಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2016ರಲ್ಲಿ ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಮತ್ತಾತನ ಸಹಚರರು ಕೊಲೆಗೆ ಯತ್ನಿಸಿದ್ದರು. ಈ ಮಧ್ಯೆ ಆರೋಪಿ ನಿಶಾಕ್ ಪೂಜಾರಿ ಮತ್ತು ಮೆಲ್ರಿಕ್ ಅಂತೊನಿ ಡಿಸೋಜನಿಗೆ ಹಳೆಯ ದ್ವೇಷವಿತ್ತು ಎನ್ನಲಾಗಿದೆ. ಕೊಲೆಯತ್ನಕ್ಕೆ ಪ್ರತೀಕಾರವಾಗಿ ಸಂದೀಪ್ ಶೆಟ್ಟಿಯು ಮೆಲ್ರಿಕ್‌ನನ್ನು ಕೊಲೆಗೈಯಲು ಸೂಚಿಸಿದ್ದ. ಅದರಂತೆ ಡಿ.25ರಂದು ದುಷ್ಕರ್ಮಿಗಳು ಮೆಲ್ರಿಕ್‌ನನ್ನು ಕೊಲೆಗೈದಿದ್ದರು.

ಬಂಧಿತ ಆರೋಪಿಗಳ ಪೈಕಿ ಪ್ರವೀಣ್‌ನ ಮೇಲೆ ಜಪ್ಪಿನಮೊಗರುವಿನಲ್ಲಿ ದೇವದಾಸ್ ಎಂಬಾತನ ಕೊಲೆ, ಪಂಪ್‌ವೆಲ್‌ನಲ್ಲಿ ರಾಜಾ ಎಂಬಾತನ ಕೊಲೆಯತ್ನ ಹಾಗೂ ವಿನೇಶ್ ಕುಮಾರ್‌ನ ಮೇಲೆ ಪಂಪ್‌ವೆಲ್‌ನಲ್ಲಿ ರಾಜಾ ಎಂಬಾತನ ಕೊಲೆಯತ್ನ, ಸಂದೀಪ್ ಶೆಟ್ಟಿಯ ಮೇಲೆ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಆರೋಪಿಗಳ ಪೈಕಿ ಸಚಿನ್ ಎಂಬಾತ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ರಾಮರಾವ್‌ರ ಮಾರ್ಗದರ್ಶನದಂತೆ ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪ ಕೆ. ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿದೆ

 

Exit mobile version