UN NETWORKS
ಧಾರವಾಡ : ಗ್ರಾಮೀಣ ಪ್ರದೇಶದ ಮಸೀದಿಗಳಲ್ಲಿ ಶೌಚಾಲಯ, ಕುಡಿವ ನೀರಿನ ಸೌಲಭ್ಯವಿಲ್ಲ ಎಂಬ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಕ್ಷಣ ಆ ಸೌಲಭ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಧಾರವಾಡ ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಪ್ರಧಾನಿ ಸೂಚನೆಯಂತೆ ಮುಖ್ಯ ಕಾರ್ಯದರ್ಶಿಗಳು ಧಾರವಾಡ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಆದೇಶಿಸಿದ್ದಾರೆ. ಈಗ ಸಿಇಒ ಅವರಿಂದಲೂ ಆದೇಶ ಹೊರಬಿದ್ದಿದ್ದು, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಮಸೀದಿಗಳನ್ನು ಹುಡುಕಿಕೊಂಡು ಹಳ್ಳಿಹಳ್ಳಿ ಸುತ್ತುತ್ತಿದ್ದಾರೆ. ಜನವರಿ ಅಂತ್ಯದ ಒಳಗಾಗಿ ಧಾರವಾಡ ಜಿಲ್ಲೆಯ ಎಲ್ಲ ಮಸೀದಿಗಳಿಗೆ ಈ ಮೂಲಸೌಕರ್ಯಗಳು ಲಭ್ಯವಾಗಲಿವೆ. ಹೀಗಾಗಿ ಗ್ರಾಮೀಣ ಭಾಗದ ಮನೆಗಳ ವೈಯಕ್ತಿಕ ಶೌಚಾಲಯಕ್ಕೆ ಸೀಮಿತವಾಗಿದ್ದ ‘ಸ್ವಚ್ಛ ಭಾರತ ಅಭಿಯಾನ’ ಇದೀಗ ಮಸೀದಿಗಳಿಗೂ ವಿಸ್ತರಣೆಯಾದಂತಾಗಿದೆ.
ಪಿಡಿಒಗಳಿಗೆ ಆದೇಶ: ಧಾರವಾಡ ಜಿ.ಪಂ. ಸಿಇಒ ಅವರು ಪಿಡಿಒಗಳಿಗೆ ಆದೇಶ ಹೊರಡಿಸಿ, ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಸೀದಿಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು. ಜತೆಗೆ ಗ್ರಾ.ಪಂ. ಸ್ವಂತ ನಿಧಿಯಲ್ಲಿ ಮಸೀದಿ ಪಕ್ಕ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಿಕೊಡಬೇಕು. ಶೌಚಾಲಯಗಳನ್ನು ಸ್ವಂತ ಅನುದಾನದಲ್ಲೇ ನಿರ್ವಹಣೆ ಮಾಡುವಂತೆ ಒಪ್ಪಿಗೆಯ ಮುಚ್ಚಳಿಕೆ ಪತ್ರವನ್ನು ಮಸೀದಿ ಆಡಳಿತ ಮಂಡಳಿಯಿಂದ ಬರೆಸಿಕೊಂಡು ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪಿಡಿಒಗಳಿಗೆ ಆದೇಶಿಸಿದ್ದಾರೆ. ಇದೀಗ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕುಂದ ಗೋಳ, ಕಲಘಟಗಿ, ನವಲಗುಂದ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿನ ಮಸೀದಿಗಳ ಸಮೀಕ್ಷೆ ಕಾರ್ಯ ಮುಗಿದಿದ್ದು, ಒಟ್ಟು 300 ಮಸೀದಿಗಳಿವೆ. ಈ ಮಸೀದಿಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಬಹುಶಃ ಜನವರಿಯೊಳಗೆ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಲಿದೆಯಂತೆ.