UN NETWORKS
ಕೊಣಾಜೆ: ಯಕ್ಷಗಾನ ಕಲಾವಿದ ಕೊಣಾಜೆಯ ದೇವಪ್ಪ ಗೌಡ ಅವರ ಮನೆಯು ಕಳೆದ ಕೆಳತಿಂಗಳ ಹಿಂದೆ ಮಳೆಗಾಳಿಗೆ ಕುಸಿದು ಬಿದ್ದು ಅವರ ಬದುಕೇ ಅತಂತ್ರವಾಗಿತ್ತು. ಆ ಸಂದರ್ಭದಲ್ಲಿ ಬಡಕಲಾವಿದನ ನೆರವಿಗೆ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್, ಪಟ್ಲ ಯಕ್ಷ ಆಶ್ರಯ ಯೋಜನೆ ಮಂಗಳೂರು ಇದರ ವತಿಯಿಂದ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಸುಮಾರು ಐದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮವು ಸೋಮವಾರ ನಡೆಯಿತು.
ನೆರಳು ಕೊಡುವ ಮರವಾಗಬೇಕು:
ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಬದುಕು ಎಂಬುದು ಮತ್ತೊಬ್ಬರಿಗೆ ನೆರಳು ಆಶ್ರಯ ನೆರಳು ಕೊಡುವ ಮರದಂತೆ ಆಗಬೇಕು. ಆಗ ನೆಮ್ಮದಿಯೊಂದಿಗೆ ಪುಣ್ಯವೂ ಸಿಗುತ್ತದೆ. ಅಲ್ಲದೆ ಓರ್ವ ಕಲಾವಿದನ ಕಷ್ಟ ನಷ್ಟಗಳನ್ನು ಮತ್ತೊಂದು ಕಲಾವಿದನಿಗೆ ಅರಿಯುವ ಶಕ್ತಿ ಇದೆ. ಹಾಗೆಯೇ ಪಟ್ಲ ಸತೀಶ್ ಶೆಟ್ಟಿ ಅವರು ಈ ಬಡ ಕಲಾವಿದನ ಸಂಕಷ್ಟವನ್ನು ಅರಿತು ಪಟ್ಲ ಫೌಂಡೇಶನ್ ಹಾಗೂ ಶ್ರೀ ರಾಮಾಂಜನೆಯ ವ್ಯಾಯಾಮಶಾಲೆಯ ಸಹಕಾರದೊಂದಿಗೆ ದೇವಪ್ಪ ಗೌಡರಿಗೆ ನೂತನ ಮನೆಯನ್ನು ಕಟ್ಟಿಕೊಟ್ಟು ಮಾದರಿ ಸಮಾಜ ಸೇವೆಯಲ್ಲಿ ತೊಡಗಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ಬಡ ಕಲಾವಿದರ ಕುರಿತು ಅವರು ಹಾಕಿಕೊಂಡಿರುವ ಯೋಜನೆಗೆ ದೇವರು ಶಕ್ತಿ ಕೊಡಲಿ ಎಂದು ಹಾರೈಸಿದರು.
ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಲ ಹರೀಶ್ ಶೆಟ್ಟಿ ಅವರು ಮಾತನಾಡಿ, ಬಡವರಿಗೆ ಸಹಾಯ ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಪುಣ್ಯದ ಕಾರ್ಯವಾಗಿದೆ. ಸಾವಿರಾರು ಇತರ ಕಾರ್ಯಕ್ರಮಕ್ಕಿಂತ ಬಡವರಿಗೆ ಸಹಾಯ ಮಾಡುವ ಇಂತಹ ಹತ್ತು ಕಾರ್ಯಕ್ರಮಗಳೇ ಶ್ರೇಷ್ಠ. ಪಟ್ಲ ಫೌಂಡೇಶನ್‍ನನ್ನು ಮುಂಬಾಯಿಯಲ್ಲೂ ಸಂಘಟಿಸಲಾಗಿದ್ದು ಉತ್ತಮ ಸ್ಪ ಂದನೆ ದೊರಕಿದೆ. ಈ ಸಂಘಟನೆಯ ವತಿಯಿಂದ ಇನ್ನಷ್ಟು ಮಾದರಿ ಕಾರ್ಯಗಳು ಆಗಲಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಆವತ್ತು ದೇವಪ್ಪ ಗೌಡರ ಮನೆಯು ಕುಸಿದು ಬಿದ್ದ ಸಂದರ್ಭದಲ್ಲಿ ಇಲ್ಲಿ ಬಂದಾಗ ಅತಂತ್ರರಾಗಿ ಕಣ್ಣಿರು ಹಾಕಿದ್ದರಯ. ಆದರೆ ದೇವರ ದಯೆಯಿಂದ ಪಟ್ಲ ಫಂಡೇಶನ್ ಸತೀಶ್ ಪಟ್ಲ ಅವರ ಸಹಕಾರದೊಂದಿಗೆ ನೂತನ ಮನೆ ನಿರ್ಮಾಣಗೊಂಡಿದ್ದು ಇದೀಗ ಅವರ ಸಂತಸದ ಕಣ್ಣೀರು ಹರಿದಿದೆ. ಪಟ್ಲ ಸತೀಶ್ ಶೆಟ್ಟಿ ಅವರು ದಾನಿಗಳ ಸಹಕಾರದೊಂದಿಗೆ ಇಂತಹ ಮಾದರಿ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ. ದೇಶ ವಿದೇಶಗಳಲ್ಲಿ ಈಗಾಗಲೇ ಜನಮನ್ನಣೆಯನ್ನು ಗಳಿಸಿರುವ ಸತೀಶ್ ಪಟ್ಲ ಅವರಿಗೆ ದೇವರು ದೀರ್ಘ ಆಯುಷ್ಯ ಆರೋಗ್ಯವನ್ನು ಕೊಟ್ಟು ಇನ್ನಷ್ಟು ಕೀರ್ತಿವಂತರನ್ನಾಗಿ ಮಾಡಲಿ ಎಂದು ಹೇಳಿದರು.
ಸಮಾರಂಭದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ರವೀಂದ್ರ ರೈ ಹರೇಕಳ, ಸಮಾಜಸೇವಕ ಪ್ರಸಾದ್ ರೈ ಕಲ್ಲಿಮಾರ್, ಶ್ರೀ ರಾಮಾಂಜನೆಯ ವ್ಯಾಯಾಮ ಶಾಲೆಯ ನಾಗೇಶ್ ಗುಡ್ಡುಪಾಲ್, ಕುಡುಬಿ ಸಮಾಜದ ಮುಖಂಡ ನರ್ಸುಗೌಡ, ಪುರುಷೋತ್ತಮ ಭಂಡಾರಿ ಕಡಂದೆಲೆ, ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ, ಬಿಜೆಪಿ ಮುಖಂಡ ಚಂದ್ರಹಾಸ್ ಉಚ್ಚಿಲ್, ಪಟ್ಲ ಫೌಂಡೇಶನ್ ಸದಸ್ಯ ಪ್ರದೀಪ್ ಆಳ್ವ ಅಜೇಕಳಗುತ್ತು, ಮಂಜುನಾಥ ಗೌಡ ಅಣ್ಣೆರೆಪಾಲ್, ಎಪಿಎಂಸಿ ಸದಸ್ಯೆ ಮುತ್ತು ಶೆಟ್ಟಿ, ನಮಿತಾ ಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.
ಕದ್ರಿ ನವನೀತ್ ಶೆಟ್ಟಿ ಅವರು ಪಟ್ಲ ಫೌಂಡೇಶನ್‍ನ ಯೋಜನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಾಂಜನೆಯ ವ್ಯಾಯಾಮಶಾಲೆಯ ಗೋಪಾಲ್ ಅಣ್ಣೆರೆಪಾಲ್ ಸ್ವಾಗತಿಸಿ, ನವೀನ್ ಕೊಪ್ಪಲ ಕಾರ್ಯಕ್ರಮ ನಿರೂಪಿಸಿದರು.
ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಪಟ್ಲ ಯಕ್ಷ ಆಶ್ರಯ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡ ಪ್ರಥಮ ಮನೆಯು ನಿರ್ಮಾಣಗೊಂಡು ಇದೀಗ ಗೃಹಪ್ರವೇಶ ನಡೆದಿರುವ ಮನಸ್ಸಿಗೆ ನೆಮ್ಮದಿ ಸಂತಸ ತಂದಿದೆ. ಯಕ್ಷ ಆಶ್ರಯ ಯೋಜನೆಯಡಿಯಲ್ಲಿ ಈಗಾಗಲೇ ನೂರು ಮನೆ ನಿರ್ಮಾಣದ ಯೋಜನೆ ರೂಪಿಸಿಕೊಳ್ಳಲಾಗಿದೆ. ಇಂತಹ ಪುಣ್ಯದ ಕೆಲಸ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ನಾನು ಇಲ್ಲಿ ಕೇವಲ ಮಧ್ಯವರ್ತಿ ಇದ್ದ ಹಾಗೆ. ಇದರ ಎಲ್ಲ ಕೀರ್ತಿಯೂ ದಾನಿಗಳಿಗೆ ಸಲ್ಲಬೇಕು.
ಸತೀಶ್ ಪಟ್ಲ