Site icon Ullalavani

ದಲಿತ ಯುವತಿ ಅತ್ಯಾಚಾರ ಪ್ರಕರಣ ಮಂಗಳೂರು ವಿ.ವಿಯಲ್ಲಿ ಪ್ರತಿಭಟನೆ

UN NETWORKS

ಕೊಣಾಜೆ: ವಿಜಾಪುರದ ಧಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಎಲ್ಲಾ ಸಮಾನ ಮನಸ್ಕರು ಸೇರಿಕೊಂಡು ಕರ್ನಾಟಕ ಬಂದ್ ನಡೆಸುವ ಅನಿವಾರ್ಯ ಎದುರಾಗಬಹುದು, ಈ ನಡುವೆ ಸಂಭವಿಸುವ ದುರತಂತಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ /ಪಂಗಡದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ ಮುಖದ್ವಾರದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೂ ಗಳ ಬೇರೆ ಜಾತಿಯವರಾಗುತ್ತಿದ್ದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಮಾನವೀಯತೆ ದೃಷ್ಟಿಯಿರದೆ ಸಾಮಾಜಿಕ ಕಳಕಳಿಯೇ ಇಲ್ಲದ ಹಿಂದು ಮುಖಂಡರು ದಲಿತರ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡಿ ಮರುಳು ಮಾಡುತ್ತಿದ್ದೀರಿ. ದಲಿತರನ್ನು ಕೇವಲ ಮತಕ್ಕಾಗಿ ಬಳಸುವ ಪಕ್ಷಗಳು ಅಮಾಯಕ ಯುವತಿ ಹತ್ಯೆ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದರ ಹಿಂದಿನ ಸಂಚು ಏನೆಂಬುದು ತಿಳಿದಿಲ್ಲ. ಘಟನೆ ಖಂಡಿಸಿ ಇಂದು ವಿಜಾಪುರ ಬಂದ್ ಆಗಿದ್ದರೆ, ಮುಂದೆಯೂ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಇಡೀ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾದೀತು ಎಂದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಇಸ್ಮತ್ ಪಜೀರು ಮಾತನಾಡಿ ಕೇಂದ್ರದಲ್ಲಿ ಮೋದಿ ಸರಕಾರದ ಬಳಿಕ ಸಂಘಪರಿವಾರದ ಅಟ್ಟಹಾಸ ಮುಂದುವರಿದಿದೆ. ಅಕ್ಕಮಹಾದೇವಿಯ ಊರಿನಲ್ಲಿ ದಲಿತ ಯುವತಿಯ ಹತ್ಯೆಯನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಹತ್ಯೆ ನಡೆಸಿರುವ ಆರೋಪಿಗಳು ಮೃತದೇಹವನ್ನು ದರ್ಗಾ ಸಮೀಪ ಎಸೆದು ಅಲ್ಲಿಯೂ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ. ರಾಯಚೂರಿನಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಬಿಜೆಪಿ ಮುಖಂಡನೋರ್ವ ಅತ್ಯಾಚಾರವೆಸಗಿದ್ದಾನೆ. ವಿಜಯಪುರದ ಧಾನವ್ವ ಪ್ರಕರಣದಲ್ಲಿ ಆರೋಪಿಗಳು ಬಾಲಾಪರಾಧಿಗಳು ಎಂದು ತಪ್ಪಿಸಲು ಬಿಡದೆ ಅವರ ಮೇಲೆಯೂ ಗೂಂಡಾಕಾಯ್ದೆಯನ್ನು ಹೊರಿಸಿ ಜೈಲಿಗೆ ಅಟ್ಟಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಶೋಧನಾ ವಿದ್ಯಾರ್ಥಿ ಹರೀಶ್.ಎಂ, ಮಂಗಳೂರು ವಿ.ವಿ ಪ್ರಾಧ್ಯಾಪಕರಾದ ಪ್ರೊ. ವಿಶ್ವನಾಥ್, ಡಾ.ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

 

Exit mobile version