Site icon Ullalavani

ಕಾವ್ಯವನ್ನು ಅರ್ಥೈಸುವಾಗ ಕವಿಯ ಬಗ್ಗೆಯೂ ತಿಳಿದುಕೊಳ್ಳಬೇಕು: ರಾಧಾಕೃಷ್ಣ ಕಲ್ಚಾರ್

UN NETWORKS

ಮುಡಿಪು: ನಾವು ಕಾವ್ಯವನ್ನು ಅರ್ಥೈಸುವಾಗ ಕವಿಯ ಬಗ್ಗೆ ಹಾಗೂ ಆತನ ಸ್ವಭಾವದ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಅವರ ರಚನೆಯ ನೈಜತೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಎಷ್ಟೋ ಸಂದರ್ಭಗಳಲ್ಲಿ ಕವಿಗಳು ಅಜ್ಞಾತರಾಗಿಯೇ ಉಳಿಯುತ್ತಾರೆ, ಇನ್ನು ಕೆಲವು ಸಂದರ್ಭದಲ್ಲಿ ಬರೆದದ್ದು ಯಾರೋ ಕೀರ್ತಿ ಯಾರಿಗೋ ಸಲ್ಲುತ್ತದೆ. ಹಾಗೆಯೇ ಹಿಂದೆ ಯಕ್ಷಗಾನ ಕ್ಷೇತ್ರದಲ್ಲಿ ಕೂಡಾ ಇಂತಹ ಹಲವಾರು ಮಹಾನ್ ಕವಿಗಳು ಇದ್ದರೂ ಅಜ್ಞಾತರಾಗಿ ಉಳಿದಿದ್ದಾರೆ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವ ವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸದಲ್ಲಿ `ಮುದ್ದಣ’ ಕವಿಯ ಕುರಿತು ಮಾತನಾಡಿದರು.

ಮುದ್ದಣ ಕವಿಯು ರತ್ನಾವತಿ ಕಲ್ಯಾಣ ಹಾಗೂ ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದನು. ಅಪಾರವಾದ ಜ್ಞಾನ ಕೌಶಲ್ಯವನ್ನು ಹೊಂದಿದ್ದ ಮುದ್ದಣ ಕವಿಯು ತನ್ನ ಮೂವತ್ತೊಂದನೆ ವಯಸ್ಸಿಗೆ ನಿಧನ ಹೊಂದಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅಪಾರವಾದ ಜ್ಞಾನ ಭಂಡಾರವಾಗಿದ್ದ ಅವರು ಪಾರ್ತಿಸುಬ್ಬನಂತೆ ಪ್ರಸಿದ್ದಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಇವರ ಪದ್ಯಗಳು ಜಠಿಲ ಪದಗಳನ್ನು ಒಳಗೊಂಡಿದ್ದು ಇದನ್ನು ಅರ್ಥೈಸಿಕೊಳ್ಳುವುದು ಬಹಳ ಕಷ್ಟವಾಗಿತ್ತು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೇಶವ ಅವರು, ಕರಾವಳಿಯ ಜನರಿಗೆ ಯಕ್ಷಗಾನದ ಮೂಲಕವಾಗಿ ಪುರಾಣ ಜ್ಞಾನವನ್ನು ಅಂದಿನ ಕಾಲದಲ್ಲೇ ಅಂದಿನ ಕಾಲದಲ್ಲೇ ಪಡೆದುಕೊಳ್ಳಲು ಸಾಧ್ಯವಾಗಿತ್ತು. ಸರ್ವಾಂಗೀಣ ಕಲೆ ಎಂದೆನಿಕೊಂಡಿರುವ ಯಕ್ಷಗಾನವು ನಮ್ಮ ಸಾಂಸ್ಕೃತಿಕತೆಯ ಹೆಗ್ಗುರುತು ಆಗಿದ್ದು, ಯುವ ಜನರು, ವಿದ್ಯಾರ್ಥಿಗಳು ಈ ಕಲೆಯ ಮಹತ್ವವನ್ನು ಅರಿತುಕೊಂಡು ಕಲೆಯ ಶ್ರೀಮಂತಿಕೆಗೆ ಸಾಕ್ಷಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನದ ಉಳಿವು ಬೆಳವಣಿಗೆಗಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಜಿರೆ ಎಸ್‍ಡಿಎಂ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಮಾಲಿನಿ, ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version