UN NETWORKS
ಉಳ್ಳಾಲ: ಹತ್ತು ವರ್ಷಗಳ ಸುದೀರ್ಘ ಅವಧಿ ಹಿಡಿದರೂ ಒಳಚರಂಡಿ ಕಾಮಗಾರಿ ಅರೆಬರೆ ನಡೆದಿರುವ ಹಿನ್ನೆಲೆಯಲ್ಲಿ ಆಕ್ರೋಶಿತರಾದ ನಗರಸಭಾ ಸದಸ್ಯರು ಸೋಮವಾರ ನಡೆದ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶಿತರಾದರು. ಇದರ ಪರಿಣಾಮ ಸಂಬಂಧಪಟ್ಟ ಇಲಾಖೆ ಅಧಿಕಾರಿ ತೀವೃವಾಗಿ ತರಾಟೆಗೆ ಒಳಗಾದರು.
ಕೌನ್ಸಿಲರ್ ಅಬ್ದುಲ್ ಫತಾಕ್ ಯುಜಿಡಿ ಕಾಮಗಾರಿ ಆರಂಭಗೊಂಡ ವರ್ಷ ಹತ್ತಾದರೂ ಇನ್ನೂ ಮುಗಿದಿಲ್ಲ, 65 ಕೋಟಿ ಯೋಜನೆಯಲ್ಲಿ ಆರಂಭಿಸಿರುವ ಕಾಮಗಾರಿ ಮುಗಿಯುವ ಹೊತ್ತಿಗೆ 300 ಕೋಟಿ ದಾಟುವ ಭೀತಿಯಿದೆ. ಪ್ರತೀ ಸಭೆಯಲ್ಲೂ ಅಧಿಕಾರಿ ಶೋಭಾ ಅವರು ಆಗಮಿಸಿ ಉಡಾಫೆಯ ಉತ್ತರ ನೀಡುತ್ತಾರೆ. ಮುಂದಕ್ಕೆ ಶೋಭಾ ಬದಲು ಇಲಾಖೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೇ ಬರಬೇಕು ಎಂದು ಆಗ್ರಹಿಸಿದರು.
ಇವರ ಮಾತಿಗೆ ಮುಸ್ತಫಾ ಅಬ್ದುಲ್ಲಾ ಬೆಂಬಲ ಸೂಚಿಸಿ 2014ರಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಶೋಭಾ ಅವರೇ ಹಿಂದೆ ತಿಳಿಸಿದ್ದರು. ಇದೀಗ 2017 ಆದರೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಆರಂಭಿಸುವಾಗಲೇ ಭೂಸ್ವಾಧೀನ ಮಾಡದ್ದು ಇಲಾಖೆಯ ತಪ್ಪು. ಅದನ್ನು ನಗರಸಭೆ ಮೇಲೆ ಹಾಕಬೇಡಿ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ ಎಂದರು.
ಫಾರೂಕ್ ಉಳ್ಳಾಲ ಧ್ವನಿಗೂಡಿಸಿ ಯುಜಿಡಿ ಕಾಮಗಾರಿಯೇ ಕಳ್ಳ ಪೊಲೀಸ್, ಮ್ಯಾಚ್ ಫಿಕ್ಸಿಂಗ್‍ನಂತಾಗಿದೆ. ಯುಜಿಡಿ ಮತ್ತು ನೀರಿನ ಪೈಪ್ ಜೊತೆಯಾಗಿ ಹಾಕಿದ್ದರಿಂದ ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದೆ. ಕೆಡಿಬಿ ಯೋಜನೆಯ ತುಂಬೆ ನೀರು ಹೇಳಿಕೊಳ್ಳಲು ನಗರಸಭಾ ವ್ಯಾಪ್ತಿಗೆ ಬರುತ್ತದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಕೇವಲ ನಾಲ್ಕು ವಾರ್ಡ್‍ಗಳಿಗೆ ಮಾತ್ರವೇ ಹೋಗುತ್ತಿದೆ. ಈ ಬಗ್ಗೆ ಚರ್ಚಿಸಲು ವಿಶೇಷ ಸಭೆ ನಿಗದಿಪಡಿಸುವಂತೆ ಒತ್ತಾಯಿಸಿದರು. ಅಶ್ರಫ್ ಬಾವ, ಮಹಮ್ಮದ್ ಮುಕಚ್ಚೇರಿ, ದಿನೇಶ್ ರೈ ಸಹಿತ ಇತರ ಕೌನ್ಸಿಲರ್‍ಗಳು ಧ್ವನಿಗೂಡಿಸಿದರು.
ತೆಂಗಿಗೆ ರೋಗವಲ್ಲ, ಕೀಟಬಾಧೆ:
ಸಭೆಯಲ್ಲಿ ತೋಟಕಾರಿಕಾ ಇಲಾಖಾಧಿಕಾರಿ ಪ್ರದೀಪ್ ಡಿಸೋಜ ಭಾಗವಹಿಸಿ, ಉಳ್ಳಾಲ ಭಾಗದಲ್ಲಿ ತೆಂಗಿನ ಗರಿಗಳು ಒಣಗುತ್ತಿದ್ದು ಕೀಟಬಾಧೆ ಕಾರಣ. ತೆಂಗನ್ನೇ ನಂಬಿರುವವರ ಆರೈಕೆಯಿಂದ ಅಂತಹ ತೋಟಗಳಿಗೆ ಕೀಟಬಾಧೆ ಬಂದಿರಲಿಲ್ಲ. ಆದರೆ ನಿರ್ಲಕ್ಷ್ಯಕ್ಕೊಳಗಾದ ತೆಂಗಿಗೆ ಬಂದ ಕೀಟಬಾಧೆ ಎಲ್ಲೆಡೆ ವ್ಯಾಪಿಸಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಉಳ್ಳಾಲದಲ್ಲೇ ಸಭೆ ನಡೆಸಲಾಗುತ್ತದೆ ಎಂದರು. ರೋಗ ಬಂದಿರುವುದು ಉಳ್ಳಾಲದಲ್ಲಿ ಆಗಿರುವುದರಿಂದ ಇಲ್ಲೇ ಉಪ ಕಚೇರಿ ತೆರೆಯುವಂತೆ ಕೌನ್ಸಿಲರ್‍ಗಳು ಆಗ್ರಹಿಸಿದರು.
ರಸ್ತೆಬದಿ ಅಂಗಡಿ ತೆಗೆಯಲು ಬಿಡಲಾರೆವು:
ಮಾಸ್ತಿಕಟ್ಟೆಯಲ್ಲಿ ರಸ್ತೆಬದಿ ಪೆಟ್ಟಿಗೆ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡಲಾಗುತ್ತಿದೆ, ಮೀನು ಮಾರಾಟವೂ ನಡೆಯುತ್ತಿದ್ದು ಇವುಗಳನ್ನು ತೆರವುಗೊಳಿಸಬೇಕು ಎಂದು ಪ್ರತಿಪಕ್ಷದ ಮಹಾಲಕ್ಷ್ಮಿ ಒತ್ತಾಯಿಸಿದರು. ಈ ಮಾತಿಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದ ಫಾರೂಕ್ ಉಳ್ಳಾಲ್, ಇಂದು ವಿದೇಶದಲ್ಲಿರುವವರು ಹಿಂದಕ್ಕೆ ಬರುತ್ತಿದ್ದು, ಪದವೀಧರರಿಗೂ ಉದ್ಯೋಗ ಇಲ್ಲದಂತಾಗಿದೆ. ಪ್ರತಿಪಕ್ಷ ನಾಯಕಿ ಸದಾ ಬಡವರ ವಿರುದ್ಧವೇ ಮಾತನಾಡುತ್ತಾರೆ. ರಸ್ತೆಬದಿ ವ್ಯಾಪಾರದಿಂದ ಜೀವನ ನಿರ್ವಹಿಸುವುದಕ್ಕೆ ಅಡ್ಡಿ ಬಂದಲ್ಲಿ ಸಭಾತ್ಯಾಗ ನಡೆಸುತ್ತೇವೆ ಎಂದು ಎಚ್ಚರಿಸಿದರು. ಬಾಝಿಲ್ ಡಿಸೋಜ ಹಾಗೂ ಕೆಲವು ಕೌನ್ಸಿಲರ್‍ಗಳು ಮಾತಿಗೆ ಸಮಹಮತ ವ್ಯಕ್ತಪಡಿಸಿದರು.
ಝುಬೇರ್ ಕುಟುಂಬಕ್ಕೆ ಗರಿಷ್ಟ ಪರಿಹಾರ:
ದುಷ್ಕರ್ಮಿಗಳ ತಲವಾರು ದಾಳಿಗೆ ಬಲಿಯಾದ ಝುಬೇರ್ ಕುಟುಂಬಕ್ಕೆ ಗರಿಷ್ಟ ಪರಿಹಾರ ನೀಡುವಂತೆ ಕೌನ್ಸಿಲರ್‍ಗಳು ಆಗ್ರಹಿಸಿದರು. ಈ ಸಂದರ್ಭ ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ, ಕೌನ್ಸಿಲರ್‍ಗಳ ಗೌರವಧನ ಹಾಗೂ ಅಧಿಕಾರಿ ಸಿಬ್ಬಂದಿಯ ಒಂದು ದಿನದ ವೇತನ ನೀಡೋಣ ಎಂದರು. ಈ ಮಾತಿಗೆ ಫಾರೂಕ್ ಉಳ್ಳಾಲ್, ಮಹಮ್ಮದ್ ಮುಕಚ್ಚೇರಿ ಹೊರತುಪಡಿಸಿ ಇನ್ಯಾರೂ ಮಾತನಾಡದ ಕಾರಣ ಸಭೆ ಮುಂದುವರಿಯಿತು.
ಸದ್ಭಾವನಾ ದಿನ-ಕನ್ನಡ ರಾಜ್ಯೋತ್ಸವ ಆಚರಣೆ
ಕನ್ನಡ ರಾಜ್ಯೋತ್ಸವ ಹಾಗೂ ಸದ್ಭಾವನಾ ದಿನ ಜೊತೆಯಾಗಿ ಆಚರಿಸುವುದರಿಂದ ಖರ್ಚು ಉಳಿಸಬಹುದು. ನ.1ರಂದು ಬೆಳಗ್ಗೆ ಸ್ವಸಹಾಯ ಸಂಘದ ಸದಸ್ಯೆಯರಿಗೆ ಸ್ಪರ್ಧೆ, ಶಾಲಾ ಮಕ್ಕಳ ಮೆರವಣಿಗೆ, ಚೆಕ್ ಅಂಗವೈಕಲ್ಯವುಳ್ಳವರಿಗೆ ಪರಿಕರ ಹಾಗೂ ವಿತರಣೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.
ಸಿಆರ್‍ಝೆಡ್ ಬಗ್ಗೆ ಆಕ್ಷೇಪಣೆ ಸಲ್ಲಿಸುವ ನಿಟ್ಟಿನಲ್ಲಿ ನ.3ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಇಂದಿರಾ ಕ್ಯಾಂಟೀನ್ ಆರಂಭಕ್ಕೆ ತೊಕ್ಕೊಟ್ಟು ಚೆಕ್‍ಪೋಸ್ಟ್ ಬಳಿ 15 ಸೆಂಟ್ಸ್ ಜಮೀನು ಗುರುತಿಸಲಾಗಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ತಿಳಿಸಿದರು.