UN NETWORKS
ಚೆಂಬುಗುಡ್ಡೆ: `ಗ್ರಾಮ ಪಂಚಾಯಿತಿ ನೀಡಿದ ಡೋರ್ ನಂಬ್ರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ವಿದ್ಯುತ್ ಸಂಪರ್ಕ ಪಡೆಯಲು ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು ಎನ್ನುವುದು ಯಾವ ನಿಯಮ, ರಾಜ್ಯಪಾಲರೂ ಸಹಿ ಹಾಕದ ಇದು ತಲಪಾಡಿಯಲ್ಲಿ ಮಾತ್ರ ಇರುವುದೇಕೆ, ನಾವೂ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ’ ಇದು ವಿದ್ಯುತ್ ಗ್ರಾಹಕ ಅಬ್ಬಾಸ್ ಉಚ್ಚಿಲ್ ಅವರ ಪ್ರಶ್ನೆ.
ಉಳ್ಳಾಲ ಉಪವಿಭಾಗ ಮೆಸ್ಕಾಂ ಜನಸಂಪರ್ಕ ಸಭೆ ಬುಧವಾರ ಚೆಂಬುಗುಡ್ಡೆಯಲ್ಲಿರುವ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ದಾಖಲೆಗಳೊಂದಿಗೆ ಭಾಗವಹಿಸಿದ್ದ ಅಬ್ಬಾಸ್ ಉಚ್ಚಿಲ್, ಮೇಲಿನ ಪ್ರಶ್ನೆ ಕೇಳಿ ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂ ಎಂಬುದು ಒಂದು ಕಂಪನಿ, ಇದಕ್ಕೂ ಗ್ರಾಮ ಪಂಚಾಯಿತಿ ಪಿಡಿಓಗೂ ಇರುವ ಸಂಬಂಧವಾದರೂ ಏನು? ವಿದ್ಯುತ್ ಸಂಪರ್ಕ ಪಡೆಯಲು ಡೋರ್ ನಂಬ್ರ ಸಹಿತ ದಾಖಲೆಗಳನ್ನು ಮಾತ್ರವೇ ನೀಡಬೇಕಾಗುತ್ತದೆ, ಆದರೆ ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರವೂ ಪಡೆಯಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಸುಖಾಸುಮ್ಮನೆ ಬಡವರನ್ನು ಅಲೆದಾಡಿಸುದೇಕೆ, ಈ ಬಗ್ಗೆ ತಿಳಿಯಬೇಕಾದರೆ ನಾಲ್ಕು ದಿನ ಪಂಚಾಯತ್‍ರಾಜ್ ಪುಸ್ತಕ ಓದಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕ ಜೀವನ್ ಉಳಿಯ ಮಾತನಾಡಿ, ಮೆಸ್ಕಾಂಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರು ನೀಡಿದರೆ ಪರಿಹಾರಕ್ಕೆ ಎಷ್ಟು ದಿನ ಬೇಕು, ತಾನು ನದಿ ತಟದಲ್ಲಿ ವಾಸಿಸುವ ತಾನು ವಿದ್ಯುತ್ ಇಲ್ಲ ಎಂದ ಸಂಜೆ ದೂರು ನೀಡಿದ್ದರೂ ಮರುದಿನ ಮಧ್ಯಾಹ್ನ ಸಮಸ್ಯೆ ಬಗೆಹರಿಯಿತು, ಇಷ್ಟು ತಡವಾಗುವುದೇಕೆ ಎಂದು ಪ್ರಶ್ನಿಸಿದರು.
ಮೆಸ್ಕಾಂನಲ್ಲಿ ಸಂಜೆ ಐದು ಗಂಟೆ ಬಳಿಕ ವಿದ್ಯುತ್ ಬಿಲ್ ಪಾವತಿಸಲು ಬಂದರೆ 500, 2000 ರೂಪಾಯಿ ನೋಟು ಸ್ವೀಕರಿಸದ ಕಾರಣ ಗ್ರಾಹಕರು ಹಿಂದಕ್ಕೆ ಹೋಗಬೇಕು, ಇಲ್ಲವೇ ಚಿಲ್ಲರೆಗಾಗಿ ಪರದಾಡಬೇಕು. ಮರುದಿನ ಸಿಬ್ಬಂದಿ ಪೀಸ್ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ 10 ರೂಪಾಯಿಯ ಕಾಯಿನ್ ಸರ್ಕಾರ ನಿಷೇಧಿಸದಿದ್ದರೂ ಮೆಸ್ಕಾಂನಲ್ಲಿ ಸ್ವೀಕರಿಸುದಿಲ್ಲ ಏಕೆ ಎಂದು ಕೇಳಿದರು.
14ನೇ ಹಣಕಾಸು ಯೋಜನೆಯಡಿ ದಾರಿದೀಪಳವಡಿಕೆ ನಿಟ್ಟಿನಲ್ಲಿ ನಗರ ಸಭೆಯಿಂದ ಹಣ ಪಾವತಿಸಲಾಗಿದ್ದರೂ ಕಂಬ ಅಳವಡಿಸುವ ಕೆಲಸ ಮುಗಿದಿಲ್ಲ, ಶೀಘ್ರ ಚುನಾವಣೆ ಇರುವುದರಿಂದ ಬಳಿಕ ಕೆಲಸ ಮಾಡಲು ಆಗದ ಕಾರಣ ಕಂಬ ಆದಷ್ಟು ಬೇಗ ಅಳವಡಿಸಿ ದಾರಿದೀಪ ಹಾಕಲು ಅವಕಾಶ ಕಲ್ಪಿಸಿ ಎಂದು ನಗರಸಭಾ ಸದಸ್ಯ ಬಾಝಿಲ್ ಡಿಸೋಜ ಮನವಿ ಮಾಡಿದರು.
ಮೊಬೈಲ್‍ನಲ್ಲೇ ಮಾಹಿತಿ ವ್ಯವಸ್ಥೆ:
ಮೆಸ್ಕಾಂನ ಬಿಲ್ ಮೊತ್ತ, ಪಾವತಿಯಾಗಿರುವ ಬಗ್ಗೆ ಹಾಗೂ ಬಾಕಿಯಿದ್ದಲ್ಲಿ ಮೊಬೈಲ್‍ನಲ್ಲಿ ಸಂದೇಶ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಗ್ರಾಹಕರಿಂದ ಮೊಬೈಲ್ ಸಂಖ್ಯೆ ಸಂಗ್ರಹ ಮಾಡಲಾಗಿದೆ. ದಾರಿರೀಪ ಅಳವಡಿಸುವ ಕೆಲಸ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ,ನಗರ ಪಂಚಾಯಿತಿಗಳೇ ಮಾಡಬೇಕು. ಉಳ್ಳಾಲ ನಗರಸಭೆ ಈ ಕಾರ್ಯಕ್ಕೆ ಈಗಾಗಲೇ 57 ಲಕ್ಷ ಹಣ ಪಾವತಿಸಿದ್ದು, ಕಂಬದಲ್ಲೇ ಮೀಟರ್ ಹಾಗೂ ಸ್ವಯಂಚಾಲಿತ ಸ್ವಿಚ್ಛ್ ಅಳವಡಿಸಲಿದ್ದು ಇದು ಉತ್ತಮ ಯೋಜನೆಯಾಗಿದೆ ಎಂದು ಉಳ್ಳಾಲ ಉಪವಿಭಾಗ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ತಿಳಿಸಿದರು.
ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ಸದಸ್ಯ ದಿನೇಶ್ ರೈ, ಮೆಸ್ಕಾಂ ಅತ್ತಾವರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಾರಾಮ್, ಸಹಾಯಕ ಅಭಿಯಂತರರಾದ ಪ್ರವೀಣ್, ರಾಜೇಶ್, ತಾಂತ್ರಿಕ ವಿಭಾಗ ಅಭಿಯಂತರೆ ನೀನಾ, ಲೆಕ್ಕಾಧಿಕಾರಿ ಮೆಲ್ವಿನ್, ಕಿರಿಯ ಅಭಿಯಂತರರಾದ ವಿನೋದ್, ನಿತೇಶ್, ಗುತ್ತಿಗೆದಾರ ಟಿ.ಎಸ್.ಅಬೂಬಕ್ಕರ್, ಪ್ರಮುಖರಾದ ಸೀತಾರಾಮ್ ಬಂಗೇರ, ಸೋಮೇಶ್ವರ ಗ್ರಾ.ಪಂ. ಸದಸ್ಯ ಹರಿಶ್ಚಂದ್ರ ಇನ್ನಿತರರು ಉಪಸ್ಥಿತರಿದ್ದರು.
ವ್ಯವಸ್ಥಿತ ಸಭೆ:
ಕಳೆದ ಬಾರಿ ಜನಸಂಪರ್ಕ ಸಭೆ ಕಚೇರಿಯೊಳಗೆ ಅಯೋಜಿಸಲಾಗಿದ್ದು, ಭಾಗವಹಿಸಿದ್ದವರು ಇಕ್ಕಟ್ಟು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರದ ಸಭೆ ಮೆಸ್ಕಾಂ ಆವರಣದಲ್ಲಿ ಶಾಮಿಯಾನ ಅಳವಡಿಸಿ ವ್ಯವಸ್ಥಿತ ರೀತಿಯಲ್ಲಿ ಅಯೋಜಿಸಲಾಗಿತ್ತು. ಕಳೆದ ಬಾರಿಗಿಂತ ಹೆಚ್ಚಿನ ಗ್ರಾಹಕರು ಭಾಗವಹಿಸಿ ಸಮಸ್ಯೆ, ಸಲಹೆ ಹೇಳಿಕೊಂಡರು. ಈ ಬಾರಿ ಸಭೆ ನಡೆದಿದ್ದು ಸಾರ್ವಜನಿಕರಿಗೂ ತಿಳಿಯುವಂತೆ ಮಾಡಲಾಗಿತ್ತು.
`ವಿದ್ಯುತ್ ನಿರ್ವಹಣೆಯಲ್ಲಿ ಲೋಪವಾಗುತ್ತಿದೆ ಎನ್ನುವುದು ಸಾರ್ವಜನಿಕರ ದೂರು, ಸಿಬ್ಬಂದಿ ಕೊರತೆಯಿಂದ ಒಂದಷ್ಟು ಸಮಸ್ಯೆ ಬಂದಿತ್ತು, ಇದೀಗ ಸಿಬ್ಬಂದಿ ಹಾಗೂ ವಾಹನ ಬಂದಿರುವುದರಿಂದ ಮುಂದಕ್ಕೆ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಿದೆ’
ರಾಜಾರಾಮ್, ಅತ್ತಾವರ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ.