UN NETWORKS
ಪಜೀರು: ಗೋ ಮಾತೆ ಇಡೀ ವಿಶ್ವಕ್ಕೇ ತಾಯಿಯಾಗಿದ್ದಾಳೆ. ಗೋಸಂಪತ್ತನ್ನು, ಗೋ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸುವ ಕೆಲಸ ಮಾಡಬೇಕು ಎಂದು ಸುರತ್ಕಲ್‍ನ ವೇದಮೂರ್ತಿ ಶ್ರೀ ಮಹೇಶ್ ಮೂರ್ತಿ ಅವರು ಹೇಳಿದರು.
ಅವರು ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಭಾನುವಾರ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಗೋ ಪಾವಿತ್ರ್ಯ, ಚಿಂತನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಬ್ರಿಟೀಷರು ಒಡೆದು ಆಳುವ ನೀತಿಯ ಪರಿಣಾಮ ಭಾರತದಲ್ಲಿ ವ್ಯವಸ್ಥಿತವಾಗಿ ನೂರಾರು ಕಸಾಯಿಖಾನೆಗಳನ್ನು ಆರಂಭಿಸಿ ಅದೆಷ್ಟೋ ಗೋ ಸಂಪತ್ತನ್ನು ನಾಶ ಮಾಡಿದ್ದಾರೆ. ಇಂದಿಗೂ ಕಸಾಯಿಖಾನೆಗಳ ಮೂಲಕ ಗೋ ಸಂಪತ್ತು ಅವನತಿಯತ್ತ ಸಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಂಡು ಗೋವಿನ ರಕ್ಷಣೆಯ ಮಹತ್ವದ ಕೆಲಸವನ್ನು ಮಾಡಬೇಕಿದೆ. ನಮ್ಮ ಹುಟ್ಟು ಹಬ್ಬ, ಮದುವೆ ದಿನ ಸಂಭ್ರಮಗಳನ್ನು ಇಂತಹ ಗೋಶಾಲೆಗಳ ಗೋವುಗಳೊಂದಿಗೆ ಆಚರಿಸಿದರೆ ನಿಜವಾದ ಅರ್ಥ ಬರುತ್ತದೆ ಮತ್ತು ಪುಣ್ಯವೂ ಬರುತ್ತದೆ ಎಂದರು.
ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ದೇವು ಮೂಲ್ಯಣ್ಣ ಅವರು ಮಾತನಾಡಿ, ಬೆಳಿಗ್ಗೆ ಎಂದು ಗೋವಿಗೆ ನಮಸ್ಕರಿಸಿದರೆ ಮುಕ್ಕೋಟಿ ದೇವತೆಗಳ ಆಶೀರ್ವಾದ ನಮ್ಮ ಮೇಲೆ ಇರುತ್ತದೆ. ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸ ಯುವ ಸಮುದಾಯದಿಂದಾಗಬೇಕಾಗಿದೆ. ಗೋಶಾಲೆ ಎಂಬುದು ಒಂದು ದೇವಾಲಯವಿದ್ದಂತೆ. ಹಲವಾರು ಉದ್ಯಮಿಗಳು ತಮ್ಮ ಲಾಭಾಂಶದ ಒಂದು ಭಾಗವನ್ನು ದೇವಸ್ಥಾನಗಳಿಗೆ ನೀಡುತ್ತಾರೆ. ಅದರ ಬದಲು ಇಂತಹ ಗೋಶಾಲೆಗಳಿಗೆ ನೀಡಿದರೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಳ್ಳಾಲ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ ಅವರು, ಗೋರಕ್ಷಣೆಯ ಕೆಲಸದಲ್ಲಿ ಸರಕಾರ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಇಂದು ಕಾಡುಹಂದಿಯನ್ನು ಬೇಟೆಯಾಡಿ ಕೊಂದರೆ ಶಿಕ್ಷೆಯಾಗುತ್ತದೆ. ಆದರೆ ಗೋ ಹತ್ಯೆಯನ್ನು ಮಾಡಿದವರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಗೋವಿನ ಸಂತತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಲ್ಯ ಮೂಕಾಂಬಿಕ ದೇವಸ್ಥಾನದ ಗೌರವಾಧ್ಯಕ್ಷರಾದ ಮಧುಸೂದನ್ ಆಯರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಗೋವನಿತಾಶ್ರಯ ಟ್ರಸ್ಟ್‍ನ ಟ್ರಸ್ಟಿ ಶ್ರೀಧರ ಭಟ್, ಸಮಿತಿ ಸದಸ್ಯರಾದ ರಘುರಾಮ ಕಾಜವ, ಚಂದ್ರಹಾಸ ಪೂಂಜ, ಪ್ರಶಾಂತ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟ್‍ನ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅವರು ಸ್ವಾಗತಿಸಿದರು. ಟ್ರಸ್ಟಿ ಮನೋಹರ ತುಳಜಾರಾಂ ಅವರು ವಂದಿಸಿದರು. ಕಾರ್ಯದರ್ಶಿ ಡಾ.ಪಿ.ಅನಂತ ಕೃಷ್ಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಅಸೈಗೋಳಿ ಹಾಗೂ ನಾರಾಯಣ ಕುಂಪಲ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕುತ್ತಾರಿನಿಂದ ಬೀಜಗುರಿವರೆಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಗೋ ಗ್ರಾಸ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಳಿಕ ದ್ವಜಾರೋಹಣ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಅಶ್ವತ್ಥ ವೃಕ್ಷಕ್ಕೆ ನಮನ, ಗೋ ಪೂಜೆ ನಡೆಯಿತು.