Site icon Ullalavani

ಅತ್ತಾವರ:ಮೆಸ್ಕಾಂನ ಪಾಲನಾ ವೃತ್ತ ಕಚೇರಿ ಉದ್ಘಾಟನೆ

UN NETWORKS

ಮಂಗಳೂರು: ವಿದ್ಯುತ್ ಇಲಾಖೆಯಲ್ಲಿ ಡಿಪ್ಲೊಮಾ ಇಂಜಿನಿಯರ್ಸ್ ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದರೂ ಕೀಳುಮಟ್ಟದ ಭಾವನೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ, ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಭಡ್ತಿಗಳು ಸಾಕಷ್ಟಿದ್ದರೂ, ಡಿಪ್ಲೊಮಾ ಇಂಜಿನಿಯರ್ ಗಳಿಗೆ ಕೇವಲ ಮೂರೇ ಭಡ್ತಿ ಇರುವುದು ಬಹಳಷ್ಟು ಬೇಸರದ ವಿಚಾರ ಎಂದು ಬೆಂಗಳೂರಿನ ಕರ್ನಾಟಕ ಪವರ್ ಟ್ರಾನ್ಸ್‍ಮಿಷನ್ ಕಾರ್ಪೊರೇಷನ್ ಲಿ.ನ (ಕೆಪಿಟಿಸಿಎಲ್) ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಜೆ.ಲೋಕೇಶ್ ಹೇಳಿದ್ದಾರೆ.

ಅವರು ಕೆ.ಪಿ.ಟಿ.ಸಿ.ಎಲ್ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಶನ್ ಇದರ ಮಂಗಳೂರು ವೃತ್ತ ಸಮಿತಿ ವತಿಯಿಂದ ನಡೆದ ಅತ್ತಾವರ ಮೆಸ್ಕಾಂ ನ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಆವರಣದಲ್ಲಿ ಸ್ಥಳೀಯ ಕಚೇರಿ ಉದ್ಘಾಟನೆ ಹಾಗೂ ಮಂಗಳೂರಿನ ಪುರಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮ ಹಾಗೂ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯುತ್ ಕಂಪೆನಿಯ ಹಲವು ಸಂಘ, ಸಂಘಟನೆಗಳಿದ್ದರೂ 30-40 ವರ್ಷಗಳಿಂದ ಡಿಪ್ಲೊಮಾ ಇಂಜಿನಿರ್‍ಗಳಿಗೆ ಇರುವ ಸಮಸ್ಯೆಗಳ ಬಗೆಹರಿಸಲು ಅಸಾಧ್ಯವಾಗಿದೆ. ಇಡೀ ಜೀವನದಲ್ಲಿ ಬರೀ ಎರಡು ಭಡ್ತಿಯನ್ನು ಪಡೆದುಕೊಂಡು 25 ರಿಂದ 28 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಸ್ಥಿತಿಯಿದೆ. ಕಿರಿಯ ಇಂಜಿನಿಯರ್ ಆಗಿ ಸೇರ್ಪಡೆಯಾಗಿ, ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಭಡ್ತಿ ಹೊಂದಿ ಉದ್ಯೋಗ ಜೀವನ ಮುಗಿಸಬೇಕಾಗಿದೆ. ಅದೇ ದೇಶಾದ್ಯಂತ ವಿದ್ಯುತ್ ಕಂಪೆನಿಗಳಲ್ಲಿ ಸಾಮಾನ್ಯ ನೌಕರನಾಗಿ ಸೇರಿದಾತ ಇಂಜಿನಿಯರ್ ಆಗಿ , ಎಸ್ ಎಸ್ ಎಲ್ ಸಿ ಪಾಸಾದವರು ಸಿ.ಎ ಆಗಿ , ಅಸಿಸ್ಟೆಂಟ್ ಇಂಜಿನಿಯರ್ ಎಂ.ಡಿ ವರೆಗೂ ಭಡ್ತಿ ಪಡೆದುಕೊಂಡು ನಿವೃತ್ತಿಯಾಗುತ್ತಿದ್ದಾರೆ. ಈವರೆಗೂ ಇಂತಹ ಗಂಭೀರ ಸಮಸ್ಯೆ ಕುರಿತು ಮೆನೇಜ್‍ಮಂಟಿನವರು ಪರಿಗಣಿಸದಿರುವುದು ವಿಷಾಧನೀಯ. ಉನ್ನತ ಮಟ್ಟದ ಕೆಲಸದ ಜತೆಗೆ ಗುಣಮಟ್ಟದ ಕಾರ್ಯ ನಿರ್ವಹಿಸುವ ಡಿಪ್ಲೊಮಾ ಇಂಜಿನಿಯರ್ಸ್ ಅಸ್ತಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸಂಘಟನೆ ಮುಂದುವರಿಯಬೇಕಿದೆ.

ಮಂಗಳೂರಿನ ಬೋರ್ಡ್ ಸಭೆಯಲ್ಲೂ ಬೇಸರವಾಗಿದೆ: ಇತ್ತೀಚೆಗೆ ಮಂಗಳೂರಿನ ಡಿಪ್ಲೊಮಾ ಇಂಜಿನಿಯರ್ ಗಳ ಉನ್ನತೀಕರಣ ನಡೆಸಲಾಯಿತು. ಇದರಿಂದ ಸೆಕ್ಷನ್ ಅಧಿಕಾರಿಗಳ ಶೇ.25 ಹೆಚ್ಚು ಹುದ್ದೆಗಳನ್ನು ಹೆಚ್ಚಿಸುವ ಅವಕಾಶ ದೊರೆತಿದೆ. ಆದರೆ ಮಂಗಳೂರು ಉನ್ನತೀಕರಣ ಗೊಳಿಸಿದ ನಂತರ ಬೋರ್ಡ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಇಡೀ ಅಸೋಸಿಯೇಷನ್ನಿಗೆ ಬೇಸರ ಉಂಟು ಮಾಡಿದೆ. ಅಸೋಸಿಯೇಷನ್ ಮತ್ತು ಡಿಪ್ಲೋಮ ಇಂಜಿನಿಯರ್ಸ್ ಗೆ ಕಂಪ್ಯೂಟರ್ ಜ್ಞಾನವಿಲ್ಲದಿರುವುದರಿಂದ ಉನ್ನತೀಕರಣ ಮಾಡಲಾಗಿದೆ ಅನ್ನುವ ಮಾತು ಹೇಳಲಾಗಿದೆ. ಆದರೆ ವಾಸ್ತವವಾಗಿ ಮಂಗಳೂರಿನಲ್ಲಿ ಶೇ. 80 ರಿಂದ 90 ರಷ್ಟು ಭಾಗ ಕಂಪ್ಯೂಟರ್ ಮತ್ತು ಐಟಿ ಭಾಗದಲ್ಲಿ ಕಾರ್ಯನಿರ್ವಹಿಸಿದ ಜ್ಯೂನಿಯರ್ ಇಂಜಿನಿಯರ್‍ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆ ಕಾರಣವನ್ನು ಹಿಂಪಡೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಮಾಡುವುದಾಗಿ ಹೇಳಿದರು.

ಮಂಗಳೂರಿನ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. ( ಮಂ.ವಿ.ಸ.ಕಂ.ನಿ) ಇದರ ತಾಂತ್ರಿಕ ನಿರ್ದೇಶಕ ಆನಂದ ನಾಯ್ಕ್, ಮಂ.ವಿ.ಸ.ಕಂ.ನಿ. ದ ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಮಂ.ವಿ.ಸ.ಕಂ.ನಿ. ದ ಪ್ರಭಾರ ಮುಖ್ಯ ಇಂಜಿನಿಯರ್ ಡಿ.ನಾಗಾರ್ಜುನ, ಮಂಗಳೂರು ವಲಯ ಕೆಇಬಿ ಡಿಇಎ ಇದರ ಉಪಾಧ್ಯಕ್ಷ ಹಾಗೂ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಮಂಜಪ್ಪ ಮುಖ್ಯ ಅತಿಥಿಗಳಾಗಿದ್ದರು.

ಬೆಂಗಳೂರು ಕೆಪಿಟಿಸಿಎಲ್ ನ ಡಿಇಎ ನ ಕಾರ್ಯಾಧ್ಯಕ್ಷ ಅಮೋಘಸಿದ್ಧ ಬಂಡಿವಡ್ಡರ, ಹಿರಿಯ ಉಪಾಧ್ಯಕ್ಷ ಮನೋಜ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕುಮಾರ ಮುದ್ದವ್ವನವರ, ಬೆಸ್ಕಾಂ ಕೆಪಿಟಿಸಿಎಲ್‍ನ ಉಪಾಧ್ಯಕ್ಷ ಸೆಲ್ವರಾಜ್.ಎ, ಸೆಸ್ಕಾಂ ಕೆಪಿಟಿಸಿಎಲ್ ಡಿಇಎ ನ ಉಪಾಧ್ಯಕ್ಷ ರವಿಲಿಂಗಪ್ಪ.ಸಿ, ಹೆಸ್ಕಾಂ ಕೆಪಿಟಿಸಿಎಲ್ ನ ಡಿಇಎ ಉಪಾಧ್ಯಕ್ಷ ಉಮೇಶ್ ಮಲ್ಲಪ್ಪ ಹೂಗಾರ್, ಜೆಸ್ಕಾಂ ಕೆಪಿಟಿಸಿಎಲ್ ನ ಡಿಇಎನ ಉಪಾಧ್ಯಕ್ಷ ಮನೋಹರ ವಾಘ್ಮೋಡೆ, ಬೆಂಗಳೂರು ಕೆಪಿಟಿಸಿಎಲ್‍ನ ಖಜಾಂಚಿ ಟಿ.ಪುಟ್ಟಸ್ವಾಮಿ , ಮೆಸ್ಕಾಂ ಕೆಪಿಟಿಸಿಎಲ್ ನ ಡಿಇಎ ಉಪಕಾರ್ಯದರ್ಶಿ ರಾಮಚಂದ್ರ.ಎ , ಮೆಸ್ಕಾಂ ನ ಕವಿಪ್ರನಿನಿ ಪ,ಜಾ ಮತ್ತು ಪ.ಪಂ ಕಲ್ಯಾಣ ಸಮಿತಿಯ ಉಪಾಧ್ಯಕ್ಷ ನಾಗರಾಜು, ಆರ್ ಟಿ ವೃತ್ತ ಮಂಗಳೂರಿನ ಅಧೀಕ್ಷಕ ಇಂಜಿನಿಯರ್ ಪುಷ್ಪ, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ವಸಂತ ಶೆಟ್ಟಿ ಅತಿಥಿಗಳಾಗಿದ್ದರು. ವೃತ್ತ ಸಮಿತಿ ಮಂಗಳೂರು ಇದರ ಸದಸ್ಯ ನಿತೇಶ್ .ಹೆಚ್ ಭಾಗವಹಿಸಿದ್ದರು.

ಜೆಇ ಗಳಾದ ರೋಶನ್ ಕ್ರಾಸ್ತಾ ಮತ್ತು ನಿಶ್ಚಿತ್ ಡಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಎಇಇ ಸುನಿಲ್ ಮೊಂತೇರೊ ಸ್ವಾಗತಿಸಿದರು. ಎಇಇ ಪ್ರವೀಣ್ ಕುಮಾರ್ ವಂದಿಸಿದರು.

Exit mobile version