Site icon Ullalavani

ಸಚಿವ ಖಾದರ್ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

UN NETWORKS

ಉಳ್ಳಾಲ : ಕೂಲಿ ಕಾರ್ಮಿಕರು, ಬಡವರು, ದುಡಿಯುವ ಜನರ ಪರವಾಗಿ ಇಂದಿರಾ ಗಾಂಧಿ ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಮುಖಾಂತರ ಅನ್ನಾಹಾರ ನೀಡುವ ಯೋಜನೆ ಜಾರಿಗೆ ತಂದಿದೆ, ಜನವರಿ ಮೊದಲ ವಾರದಿಂದ ಉಳ್ಳಾಲದ ವಿವಿಧೆಡೆ ಕ್ಯಾಂಟೀನ್ ಆರಂಭಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು.

ಮಂಗಳೂರು ಕ್ಷೇತ್ರ ಯುವಕಾಂಗ್ರೆಸ್ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯಲ್ಲಿ ಯು.ಟಿ.ಖಾದರ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಅಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿಯೇ ವಿನೂತನ ಯೋಜನೆಗಳನ್ನು ಜಾರಿ ತಂದ ಕೀರ್ತಿ ಕರ್ನಾಟಕ ಸರಕಾರಕಿದೆ. ಈ ಯೋಜನೆಯನ್ನುಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಸ್ಥಳಿಯಾಡಳಿತ ಸಂಸ್ಥೆಗಳೊಂದಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ರಾಜಕೀಯ ಜೀವನದಲ್ಲಿ ಕಷ್ಟ, ಪ್ರತಿಭಟನೆ, ಟೀಕೆ, ಸಮಸ್ಯೆ ಎಲ್ಲವನ್ನೂ ಎದುರಿಸಿ ಮುಂದೆ ಹೋಗಬೇಕಾಗುತ್ತದೆ. ನಮ್ಮ ವಿರುದ್ಧ ಯಾರೇ ಆದರೂ ಷಡ್ಯಂತ್ರ ರೂಪಿಸಿದರೆ ಅವರ ವಿರುದ್ಧ ಸೇಡಿಗೆ ಹಾತೊರೆಯದೆ ಮುಗುಳ್ನಕ್ಕು ಮುನ್ನಡೆಯುವ ತಾಳ್ಮೆ ಇದ್ದಲ್ಲಿ ಮಾತ್ರ ಜೀವನ ಯಶಸ್ಸಿನತ್ತ ಸಾಗುತ್ತದೆ. ತಾನೂ ಇಂತಹ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದೇನೆ ಎಂದು ತಿಳಿಸಿದರು.

ಅಪರೂಪದ ಆತಿಥಿ ಸ್ವಾಗತ ಸಹಜ : ಮುಕ್ಕಚ್ಚೇರಿಯಲ್ಲಿ ಝುಬೇರ್ ಕೊಲೆ ನಡೆದ ಬಳಿಕ ಪ್ರತಿಭಟನೆ ಸಂದರ್ಭ ತನ್ನನ್ನು ಹತ್ತು ಮಂದಿ ಬೊಬ್ಬೆ ಹಾಕಿ ತಡೆದಾಗ ತಾನು ಉಳಿದ 90ಶೇ. ಜನರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಹಿಂದೆ ಹೋಗಿದ್ದೆ. ಮುಕಚ್ಚೇರಿಯಲ್ಲಿ ನಿರಂತರ ಸಂಪರ್ಕದಲ್ಲಿರುವುದರಿಂದ ಅಲ್ಲಿನವರ ಪಾಲಿಗೆ ಮನೆಮಂದಿಯಿದ್ದಂತೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಗೆದ್ದ ಬಳಿಕ ಒಮ್ಮೆಯೂ ಮುಕಚ್ಚೇರಿಗೆ ಬಂದಿಲ್ಲ. ಕಡಲ್ಕೊರೆತದಿಂದ ಮನೆ ಬಿದ್ದಾಗಲೂ ಅವರು ಬರಲಿಲ್ಲ. ಅಂತಹ ಅಪರೂಪದ ಅತಿಥಿಯನ್ನು ಸ್ಥಳೀಯರು ಸ್ವಾಗತಿಸಿರುವುದು ತಪ್ಪಲ್ಲ. ಮುಂದೆ ನಳಿನ್ ನಿರಂತರ ಉಳ್ಳಾಲಕ್ಕೆ ಬರಲಿ, ಝುಬೇರ್ ಅವರ ಮಕ್ಕಳನ್ನು ಶೀಘ್ರ ದತ್ತು ಸ್ವೀಕರಿಸುವುದು, ಐದು ಲಕ್ಷದ ಚೆಕ್ ನೀಡುವ ಕೆಲಸ ಶೀಘ್ರ ಆಗಲಿ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಶಶಿಪ್ರಭಾ ಶೆಟ್ಟಿ, ಪದ್ಮಾವತಿ ಪೂಜಾರಿ, ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಅಬ್ದುಲ್ ಜಬ್ಬಾರ್ ಬೋಳಿಯಾರ್, ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಯುವಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ರವೂಫ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟಿಗೋಳಿ, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ಶೌಕತ್ ಅಲಿ, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್ ರಫೀಕ್, ಬೆಳ್ಮ ಗ್ರಾ.ಪಂ.ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಸದಸ್ಯರಾದ ಯೂಸುಫ್ ಬಾವ, ಅಬ್ದುಲ್ ಕಬೀರ್ ಡಿ, ಕಿನ್ಯಾ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್, ಆಹಾರ ಜಾಗೃತ ನಿಗಮದ ನಿರ್ದೇಶಕ ಟಿ.ಎಸ್.ಅಬ್ದುಲ್ಲಾ, ಮೈಸೂರು ಬಾವ, ಸಮೀರ್ ಪಜೀರ್, ದೇವಕಿರಾಘವ ಉಳ್ಳಾಲ್, ಎನ್.ಎಸ್.ಕರೀಂ ಉಪಸ್ಥಿತರಿದ್ದರು.

ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ದುಲ್ ಸತ್ತಾರ್ ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ಎಂ.ಟಿ.ನಿಸಾರ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version