UN NETWORKS
ಕಣಚೂರು: ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಮೆರಿಕಾದ ಟೆಕ್ಸಾಸ್‍ನ ಪ್ರಿಸಿಷನ್ ಆರ್ಥಪೆಡಿಕ್ಸ್ ಜತೆಗೆ ಜ್ಞಾನ ಬದಲಾವಣೆ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆಯ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಇದರ ಅಂಗವಾಗಿ ಮೂಳೆಚಿಕಿತ್ಸೆ ವಿಭಾಗದ ವಿವಿಧ ವೈದ್ಯರ ಸಮ್ಮುಖದಲ್ಲಿ `ಸಂಪೂರ್ಣ ಕೀಲು ಶಸ್ತ್ರಚಿಕಿತ್ಸೆಯ’ ನೇರ ಪ್ರಸಾರವನ್ನು ಕಣಚೂರು ಆಸ್ಪತ್ರೆಯ ಆಡಿಟೋರಿಯಂನಲ್ಲಿ ಮಾಡಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥ ಡಾ. ಜಲಾಲುದ್ದೀನ್ ಎಂ. ವಿ ತಿಳಿಸಿದ್ದಾರೆ.
ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೀಲು ಬದಲಾವಣೆ ಕ್ಷೇತ್ರದಲ್ಲಿ ಜ್ಞಾನಾರ್ಜನೆ ಮತ್ತು ತರಬೇತಿಯನ್ನು ಒದಗಿಸುವ ಸಲುವಾಗಿ ಕಣಚೂರು ಸಂಸ್ಥೆ ಟೆಕ್ಸಾಸ್ ಮೂಲದ ಆರ್ಥಪೆಡಿಕ್ಸ್ ಸಂಸ್ಥೆ ಜತೆಗೆ ಕೈಜೋಡಿಸಿದೆ. ಕೆನರಾ ಆರ್ಥಪೆಡಿಕ್ಸ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ನೇರಪ್ರಸಾರವನ್ನು ಆಸ್ಪತ್ರೆ ಆಡಿಟೋರಿಯಂನಲ್ಲಿ ಆಯೋಜಿಸಿತ್ತು.
ಬಡಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸಂಸ್ಥೆ ಜತೆಗೆ ಕೈಜೋಡಿಸಲಾಗಿದೆ. ರೋಗಿಗಳನ್ನು ಅತಿಥಿಯಂತೆ ಆಸ್ಪತ್ರೆ ನೋಡಿಕೊಳ್ಳುತ್ತಿದ್ದು, ಹಣ ವ್ಯಯಿಸಿದರೂ ಶ್ರೀಮಂತರಿಗೆ ಸಿಗದ ಅನುಕೂಲತೆಗಳು ಬಡವರ್ಗದವರಿಗೆ ಕಣಚೂರು ಸಂಸ್ಥೆಯಲ್ಲಿ ಸಿಗಲಿದೆ ಎಂದರು.
ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ ಆಸ್ಪತ್ರೆಯಲ್ಲಿ 600 ಆಸನಗಳ ವ್ಯವಸ್ಥೆಯಿದ್ದು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲಿ ಸಿಗುವ ರೋಗಿಗಳಿಗೆ ಉಚಿತ ರಕ್ತಪರೀಕ್ಷೆ, ಎಕ್ಸ್ ರೇ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ ಎಂದರು.
ಅಮೆರಿಕಾದ ಪ್ರೆಸಿಷನ್ ಆರ್ಥಪೆಡಿಕ್ಸ್ ಸಂಸ್ಥೆಯ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ಖ್ಯಾತ ವೈದ್ಯ ಡಾ.ಜೋಸ್ ಮಾರಿಯೊ ಮರಿನಾ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯ ಜತೆಗೆ ಕೈಜೋಡಿಸುವ ಮೂಲಕ ವೈದ್ಯರುಗಳ ಜ್ಞಾನಗಳನ್ನು ಹಂಚಲು ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೆ ಬದಲಾದ ತಾಂತ್ರಿಕತಯೆ ಜ್ಞಾನವನ್ನು ವೈದ್ಯರಿಗೆ ತಿಳಿಸುವಂತಾಗಿದೆ. ಕಾರ್ಯಕ್ರಮ ಭವಿಷ್ಯದಲ್ಲಿ ಉತ್ತಮವಾಗಿ ಮುಂದುವರಿಯಲಿದ್ದು, ಸುಸಜ್ಜಿತ ಕಣಚೂರು ಆಸ್ಪತ್ರೆ ವ್ಯವಸ್ಥೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಶಸ್ತ್ರಚಿಕಿತ್ಸೆ ವೇಳೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಡಾ.ಆರ್.ಎಂ.ಶೆಣೈ, ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಡಾ.ಕೆ.ಯಸ್.ಆರೀಫ್, ಯುನಿಟಿ ಆಸ್ಪತ್ರೆಯ ಡಾ.ಸಚ್ಚಿದಾನಂದ ರೈ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ವಿಕ್ರಂ ಶೆಟ್ಟಿ, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ.ಪ್ರಶಾಂತ್ ಆಚಾರ್, ಕೆಎಂಸಿ ಯ ಡಾ.ಸುರೇಂದ್ರ ಕಾಮತ್ ಹಾಗೂ ತೇಜಸ್ವಿನಿ ಆಸ್ಪತ್ರೆಯ ಡಾ.ಅಜಿತ್ ಕುಮಾರ್ ಭಾಘವಹಿಸಿದ್ದರು.
ಸುದ್ಧಿಗೋಷ್ಠಿಯಲ್ಲಿ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಕೆನರಾ ಆರ್ಥಪೆಡಿಕ್ಸ್ ಸೊಸೈಟಿ ಅಧ್ಯಕ್ಷ ಡಾ.ಹೆಚ್.ಆರ್.ರೈ, ಕೆ.ಓ.ಎ ಇದರ ಅಧ್ಯಕ್ಷ ಡಾ.ಅಜಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.