Site icon Ullalavani

ಸಚಿವ ಖಾದರ್‍ರನ್ನು ವಿಧಾನಸಭೆಯಿಂದ ಹೊರಕಳುಹಿಸಿ: ಡಿವೈಎಫ್‍ಐ

UN NETWORKS

ಉಳ್ಳಾಲ: ಸಚಿವ ಖಾದರ್ ಅವರನ್ನು ಮುಕ್ಕಚೇರಿಯಿಂದ ಹಿಂದಕ್ಕೆ ಕಳುಹಿಸಿದರೆ ಸಾಲದು ,ವಿಧಾನಸಭೆಯಿಂದಲೇ ಅವರನ್ನು ಹೊರ ಕಳುಹಿಸುವ ಮೂಲಕ ಗಾಂಜ ಮುಕ್ತ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಡಿವೈ ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ.

ಅವರು ಗಾಂಜಾ ವಿರುದ್ಧ ಧ್ವನಿ ಎತ್ತಿದ್ದ ಸಾಮಾಜಿಕ ಕಾರ್ಯಕರ್ತ ಜುಬೈರ್ ಹತ್ಯೆ ಖಂಡಿಸಿ ಡಿವೈಎಫ್‍ಐ ನೇತೃತ್ವದಲ್ಲಿ ಶುಕ್ರವಾರ ಸಂಜೆ ಮುಕ್ಕಚ್ಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾದಕ ವ್ಯಸನಗಳಿಂದಾಗಿ ಶಾಂತಿಭಂಗ ಉಂಟಾಗುತ್ತಿದೆ. ಯುವಸಮುದಾಯ ಸಮಾಜಘಾತುಕರಾಗಿ ಬೆಳೆಯುತ್ತಿದ್ದಾರೆ ಅನ್ನುವ ಸಾಮಾಜಿಕ ಕಳಕಳಿಯನ್ನು ಮುಂದಿಟ್ಟು ಜುಬೈರ್ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಜೈಲುಪಾಲಾದ 18 ಪ್ರಕರಣಗಳ ಆರೋಪಿಯೇ ಜೈಲಿನಿಂದ ಬಿಡುಗಡೆಯಾಗಿ ಜುಬೈರ್ ಹತ್ಯೆ ನಡೆಸಿರುವುದು ಪೊಲೀಸ್ ವೈಫಲ್ಯತೆಯನ್ನು ತೋರಿಸುತ್ತದೆ.

18 ಪ್ರಕರಣಗಳ ಆರೋಪಿಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗದ ಉಳ್ಳಾಲ ಪೊಲೀಸರು ಕುರಿ ಕಾಯುವ ಕೆಲಸವನ್ನು ಮಾಡಬೇಕಿದೆ,. ಉಳ್ಳಾಲ ಪೊಲೀಸರು ಪತ್ತೆ ಹಚ್ಚದ ಹಲವು ಕೊಲೆ, ಕೊಲೆಯತ್ನ ಪ್ರಕರಣಗಳಿವೆ. ಕ್ಷಣಕ್ಷಣದಲ್ಲಿ ಇನ್ಸ್ ಪೆಕ್ಟರ್ ಬದಲಾವಣೆ ಮಾಡಿದರೆ ಸಾಲದು, 7-8 ವರ್ಷಗಳಿಂದ ಠಾಣೆಯಲ್ಲೇ ಠಿಕಾಣಿ ಹೂಡಿ ಕ್ರಿಮಿನಲ್ ಗಳ ಹೆಗಲಿಗೆ ಕೈಹಾಕಿ ಮಾತನಾಡುವ ಪೊಲೀಸರನ್ನು ವರ್ಗಾವಣೆ ನಡೆಸಬೇಕಿದೆ. ಉಳ್ಳಾಲವನ್ನು ಗಾಂಜ ಮುಕ್ತ ಉಳ್ಳಾಲ ವನ್ನಾಗಿ ರೂಪಿಸಬೇಕಿದೆ. ಇದಕ್ಕೆ ಗಾಂಜ ವ್ಯಸನಿಗಳನ್ನು ಬೆಂಬಲಿಸುವ ಜನಪ್ರತಿನಿಧಿಗಳು ಮತ್ತೆ ಚುನಾವಣೆಯಲ್ಲಿ ಗೆದ್ದು ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಮುಕ್ಕಚ್ಚೇರಿ ನಾಗರಿಕರದ್ದಾಗಿದೆ ಎಂದರು.

ಸಿಪಿಎಂ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಮಹಿಳಾ ಮುಖಂಡರಾದ ಪದ್ಮಾವತಿ.ಎಸ್.ಶೆಟ್ಟಿ, ಡಿವೈಎಫ್ ಐ ವಲಯ ಅಧ್ಯಕ್ಷ ಜೀವನರಾಜ್ ಕುತ್ತಾರ್, ರಫೀಕ್ ಹರೇಕಳ, ನಿತಿನ್ ಕುತ್ತಾರ್ ಉಪಸ್ಥಿತರಿದ್ದರು. ಇದೇ ವೇಳೆ ಸಿಪಿಎಂ ಮತ್ತು ಡಿವೈಎಫ್ ಐ ನಿಯೋಗ ಜುಬೈರ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿತು.

Exit mobile version