UN NETWORKS
ಉಳ್ಳಾಲ: ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ಹಿನ್ನೆಲೆಯಲ್ಲಿ , ಮೃತರ ಮನೆಗೆ ಭೇಟಿ ನೀಡಲು ಬಂದ ಸಚಿವ ಖಾದರ್ ಅವರನ್ನು ಉದ್ರಿಕ್ತ ಗುಂಪು ಘೇರಾವ್ ಹಾಕಿ ವಾಪಸ್ಸು ಕಳುಹಿಸಿದ ಘಟನೆ ಮುಕ್ಕಚ್ಚೇರಿ ಬಳಿ ಶುಕ್ರವಾರ ಸಂಜೆ ವೇಳೆ ನಡೆದಿದ್ದು, ಸಚಿವರನ್ನು ದೂಡಿಕೊಂಡೇ ಹಿಂದಕ್ಕೆ ಕಳುಹಿಸಿದ ಗುಂಪು ಕಲ್ಲು ತೂರಾಟ ನಡೆಸಿದರೂ ಯಾವುದೇ ಹಾನಿಯಾಗಿಲ್ಲ.
ಅ.4 ರಂದು ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ಮಸೀದಿ ಎದರುಗಡೆ ನಡೆದಿತ್ತು. ಐವರ ತಂಡ ತಲವಾರಿನಿಂದ ಕಡಿದು ಹತ್ಯೆ ನಡೆಸಿತ್ತು. ಸಂಶಯಿತ ಆರೋಪಿಗಳು ಯುವಕಾಂಗ್ರೆಸ್ ಮುಖಂಡನ ಬೆಂಬಲಿಗರೆಂದು ಸ್ಥಳೀಯರ ಆರೋಪ ವ್ಯಕ್ತವಾಗಿತ್ತು. ಈ ನಡುವೆ ಜುಬೈರ್ ಬಿಜೆಪಿ ಕಾರ್ಯಕರ್ತರಾಗಿದ್ದರು ಎಂಬುದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಅಲ್ಲದೆ ಜುಬೈರ್ ಹತ್ಯೆಗೆ ಸಚಿವ ಖಾದರ್ ಪರೋಕ್ಷ ಕಾರಣವೆಂದು ಆರೋಪಿಸಿದ ಮುಕ್ಕಚ್ಚೇರಿ ನಿವಾಸಿಗಳು ಜುಬೈರ್ ದಫನ ಸಂದರ್ಭವೂ ಸಚಿವರು ಬಾರದೇ ಇರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಶುಕ್ರವಾರ ಸಂಜೆ ಡಿವೈಎಫ್ ಐ ನೇತೃತ್ವದಲ್ಲಿ ಮುಕ್ಕಚ್ಚೇರಿ ಮಸೀದಿ ಎದುರುಗಡೆ ಜುಬೈರ್ ಹತ್ಯೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ನೂರಕ್ಕೂ ಅಧಿಕ ಮಂದಿ ಸ್ಥಳೀಯರು ಜಮಾಯಿಸಿದ್ದರು. ಇದೇ ಸಂದರ್ಭ ಸಚಿವ ಖಾದರ್ ಅವರು ಪೊಲೀಸ್ ವಾಹನದ ಬೆಂಗಾವಲಿನೊಂದಿಗೆ ಜುಬೈರ್ ಮನೆಗೆ ಭೇಟಿ ನೀಡಲು ಮುಕ್ಕಚ್ಚೇರಿಗೆ ಆಗಮಿಸಿದ್ದರು. ಅಷ್ಟರಲ್ಲಿ ಪ್ರತಿಭಟನೆ ನೋಡಲು ಸೇರಿದ್ದ ಸ್ಥಳೀಯರು ಉದ್ರಿಕ್ತರಾಗಿ ಜುಬೈರ್ ಮನೆಗೆ ಸಚಿವ ಖಾದರ್ ಭೇಟಿ ಕೊಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಸಚಿವ ಖಾದರ್ ವಾಹನವನ್ನು ತಡೆಹಿಡಿದಿದ್ದಾರೆ. ಕೂಡಲೇ ಸಚಿವರು ಕೆಳಗೆ ಇಳಿಯುತ್ತಿದ್ದಂತೆ ಗುಂಪು ಅವರನ್ನು ಮುಂದೆ ಬಾರದಂತೆ ತಡೆಯೊಡ್ಡಿ ಹಿಂದಕ್ಕೆ ಅವರನ್ನು ಹಾಗು ಬೆಂಬಲಿಗರನ್ನು ಅರ್ಧ ಕಿ.ಮೀ ಉದ್ದಕ್ಕೂ ದೂಡುತ್ತಲೇ ವಾಪಸ್ಸು ತೆರಳುವಂತೆ ಘೇರಾವ್ ಹಾಕಿದರು.
ಈ ವೇಳೆ ಸಚಿವರ ಬೆಂಬಲಿಗರ ಜತೆಗೆ ಉದ್ರಿಕ್ತ ಗುಂಪು ಮಾತಿನ ಚಕಮಕಿ ನಡೆಸುತ್ತಿದ್ದಂತೆ, ಸಚಿವರನ್ನು ಬೆಂಬಲಿಗರು ವಾಪಸ್ಸು ಹೋಗುವಂತೆ ಮನವಿ ಮಾಡಿಕೊಂಡರಲ್ಲದೆ, ಕಾಂಗ್ರೆಸ್ ಮುಖಂಡರೋರ್ವರ ಇನೋವಾ ಕಾರಿನಲ್ಲಿ ಸ್ಥಳದಿಂದ ವಾಪಸ್ಸಾದರು. ಉಳ್ಳಾಲ ಪೊಲೀಸರು ಹಾಗೂ ಗಸ್ತು ವಾಹನದಲ್ಲಿದ್ದ ಪೊಲೀಸರು ಗುಂಪನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕಾರು ತೆರಳುತ್ತಿದ್ದಂತೆ ಗುಂಪು ವಾಹನದ ಮೇಲೆ ಕಲ್ಲು ತೂರಾಟ ನಡೆಸಿತ್ತಾದರೂ ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ.