Site icon Ullalavani

ಉಳ್ಳಾಲದಲ್ಲಿ ಹಳೇ ವ್ಯೆಷಮ್ಯಕ್ಕೆ ಓರ್ವನ ಬಲಿ

UN NETWORKS

ಉಳ್ಳಾಲ: ಬೈಕಿನಲ್ಲಿ ಬಂದ ಆಗಂತುಕರಿಬ್ಬರು ತಲವಾರು ದಾಳಿ ನಡೆಸಿ ವ್ಯಕ್ತಿಯೋರ್ವನ ಹತ್ಯೆ ನಡೆಸಿ, ಇನ್ನೋರ್ವನ ಮೇಲೆ ದಾಳಿಗೈದು ಪರಾರಿಯಾದ ಘಟನೆ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಗೇಟಿನ ಎದುರುಗಡೆ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ.

ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಜುಬೈರ್ (39) ಹತ್ಯೆಯಾದವರು. ಇವರ ಜತೆಗಿದ್ದ ಮಾರ್ಗತಲೆ ನಿವಾಸಿ ಇಲ್ಯಾಸ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಸಂಜೆ ಮುಕ್ಕಚ್ಚೇರಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ತಲವಾರಿನಿಂದ ಜುಬೈರ್ ಅವರ ತಲೆಯ ಭಾಗಕ್ಕೆ ಕಡಿದಿದ್ದಾರೆ. ಇದನ್ನು ಇಲ್ಯಾಸ್ ಅವರು ತಡೆಯಲು ಬಂದಾಗ ಅವರ ಕೈ ಮತ್ತು ಕಾಲಿನ ಭಾಗಕ್ಕೆ ಇಬ್ಬರು ಕಡಿದು , ಬೈಕಿನ ಮೂಲಕ ಪರಾರಿಯಾಗಿದ್ದಾರೆ.

ಉಳ್ಳಾಲದ ಫಿಶ್‍ಮಿಲ್‍ನಲ್ಲಿ ಇಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜುಬೈರ್ ಅವರು ವಿವಾಹಿತರಾಗಿದ್ದು, ನಾಲ್ವರು ಶಾಲೆ ಕಲಿಯುವ ಮಕ್ಕಳಿದ್ದಾರೆ. ಹತ್ಯೆಗೀಡಾದ ಜುಬೈರ್ ಈವರೆಗೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿಲ್ಲ.

ವೈಯಕ್ತಿಕ ದ್ವೇಷ ಸಾಧ್ಯತೆ : ಜುಬೈರ್ ಕೆಲ ವರ್ಷದ ಹಿಂದೆ ಉಳ್ಳಾಲದ ನಟೋರಿಯಸ್ ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆಂಬ ಆರೋಪವಿತ್ತು. ವಾಸ್ತವವಾಗಿ ದೂರು ನೀಡದಿದ್ದರೂ, ದೂರು ನೀಡಿದವರಿಗೆ ಬೆಂಬಲಿಸಿದ್ದರೆಂಬ ಆರೋಪಕ್ಕೆ ಸಂಬಂಧಿಸಿ ನಟೋರಿಯಸ್ ರೌಡಿ ಪಡೆ ಜೀವಬೆದರಿಕೆಯನ್ನು ಒಡ್ಡಿತ್ತು. ಈ ಕುರಿತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಕೆಯನ್ನು ನಡೆಸಲಾಗಿತ್ತು. ಇದನ್ನೇ ವೈಯಕ್ತಿಕ ದ್ವೇಷವನ್ನಾಗಿ ಇಟ್ಟಿರುವ ತಂಡ ಹತ್ಯೆ ನಡೆಸಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್, ಡಿಸಿಪಿ ಹಾಗೂ ಉಳ್ಳಾಲ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Exit mobile version