Site icon Ullalavani

ಪಾನೀರು ಆಶ್ರಮದಲ್ಲಿ ಗಾಂಧಿ ಜಯಂತಿ ಆಚರಣೆ

UN NETWORKS

ಪಾನೀರು: ಅಹಿಂಸೆ, ಸರಳತೆ ಹಾಗೂ ಸೇವಾ ಮನೋಭಾವನೆಯುಳ್ಳ ಬದುಕು ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಮಹಾತ್ಮಾ ಗಾಂಧೀಜಿ. ಲಾಲ್ ಬಹದ್ದೂರ್ ಶಾಸ್ತ್ರಿ, ಮದರ್ ತೆರೆಸಾ ಅವರ ಬದುಕು ಮಾದರಿ ಎಂದು ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್ ಹೇಳಿದರು.

ಪಾನೀರು ಆಶ್ರಮ ಶಾಲೆಯಲ್ಲಿ ದ.ಕ. ಜಿಲ್ಲಾ `ಡಿ’ ವರ್ಗ ಸರಕಾರಿ ನೌಕರರ ಸಂಘದ ವಜ್ರ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಅಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ಅವರಿಗೆ ದೇಶದ ಏಕೈಕ ಮಹಾತ್ಮನ ಸ್ಥಾನ, ಕೇವಲ ಎರಡು ಜೊತೆ ಬಟ್ಟೆ ಹೊಂದಿದ್ದಂತಹ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಹಾಗೂ ಪ್ರಾಮಣಿಕತೆಗೆ ಪ್ರಧಾನ ಮಂತ್ರಿ ಸ್ಥಾನ ಹಾಗೂ ಕೊಲ್ಕೊತ್ತಾದಲ್ಲಿ ಯಾವ ಸೌಲಭ್ಯವೂ ಇಲ್ಲದ ಚಿಕ್ಕ ಕೊಠಡಿಯಲ್ಲಿ ಜೀವನ ಸಾಗಿಸುತ್ತಿದ್ದ ಮದರ್ ತೆರೆಸಾ ಅವರು ತನ್ನ ಬದುಕಿನುದ್ದಕ್ಕೂ ತೋರಿದ ಸೇವಾ ಮನೋಭಾವನೆ ಅವರನ್ನು ಭಾರತರತ್ನಕ್ಕೆ ಪ್ರಾಪ್ತವಾಗುವಂತೆ ಮಾಡಿತು ಎಂದರು.

ದೇಶದಲ್ಲಿ ನೂರಾರು ಸಮಸ್ಯೆಗಳಿವೆ. ಆದರೆ ಸಣ್ಣ ಸಮಸ್ಯೆಗಳಿಗೂ ಪ್ರತಿಭಟನೆ ಉಪವಾಸ ಮಾಡಿ ಪ್ರಯೋಜನವಿಲ್ಲ. ಹೋರಾಟ ದೇಶದ ಅಭಿವೃದ್ಧಿಗಾಗಿ ಇರಬೇಕು. ಮಹಾತ್ಮಾ ಗಾಂಧೀಜಿ ಅಹಿಂಸೆಯ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ತಮ್ಮ ಬದುಕಿನಲ್ಲಿ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಅದರಂತೆ ರಾಜ್ಯ ಸರಕಾರ ನೈರ್ಮಲ್ಯದತ್ತ ಹೆಚ್ಚಿನ ಆದ್ಯತೆ ನೀಡಿದೆ. ಹಾಗೆಯೇ ಇಡೀ ದೇಶದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಚತೆಗೆ ಮಾದರಿಯಾಗಿದ್ದು ಅರ್ಹವಾಗಿ ರಾಷ್ಟ್ರ ಪ್ರಶಸ್ತಿಗೂ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ ಎಂದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಕೇಂದ್ರ ಸರಕಾರ ಗಾಂಧಿ ಜಯಂತಿಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತಾ ಆಂಧೋಲನ ಮಾಡುವ ಮೂಲಕ ನೈರ್ಮಲ್ಯಕ್ಕೆ ಒತ್ತು ನೀಡಿದ್ದು ದೇಶದ ಸಮಸ್ತ ಜನತೆ ಕೈ ಜೋಡಿಸಿದ್ದಾರೆ ಎಂದು ನುಡಿದರು.
ಪಾನೀರು ದಯಾಮಾತೆ ಇಗರ್ಜಿಯ ಧರ್ಮಗುರು ವಂ. ಫಾ. ಡೇನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಆಹಾರ ಜಾಗೃತಿ ಸಮಿತಿ ನಿರ್ದೇಶಕ ಟಿ.ಎಸ್. ಅಬ್ದುಲ್ಲಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಉದ್ಯಮಿ ಬಾಲಕೃಷ್ಣ ಶೆಟ್ಟಿ, ಪೊಸಕುರಲ್‍ನ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಪತ್ರಕರ್ತ ಮಹಮ್ಮದ್ ಆರಿಫ್ ಪಡುಬಿದ್ರೆ, ಪಾನೀರು ಮರ್ಸಿದೆ ಆಶ್ರಮದ ಸಂಚಾಲಕಿ ಲೂಸಿ ಪಿಂಟೊ, ಕರ್ನಾಟಕ ರಾಜ್ಯಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ದೇವದಾಸ್, ಮಹಿಳಾ ಕಲ್ಯಾಣ ಸಮಿತಿ ಸದಸ್ಯೆ, ಕಾರ್ಯಕ್ರಮ ಸಂಚಾಲಕಿ ಎಚ್. ಇಂದಿರಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರ ಹೆಸರನ್ನು ಜಾಸ್ಮಿನ್ ವಾಚಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.

ಜಿಲ್ಲಾ `ಡಿ’ ವರ್ಗ ಸರಕಾರಿ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಸ್ವಾಗತಿಸಿದರು. ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿರಿಲ್ ರೋಬರ್ಟ್ ಡಿಸೋಜ ವಂದಿಸಿದರು.

Exit mobile version