Site icon Ullalavani

ಕುತ್ತಾರು: ದುರ್ಗಾವಾಹಿನಿಯಲ್ಲಿ ಎಂಬ್ರಾಯಿಡರಿ ತರಬೇತಿ ಸಮಾಪನ

UN NETWORKS

ಕುತ್ತಾರು: ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಹಿಳೆಯರಿಗೆ ಸ್ವಾವಲಂಬಿಯಾಗಲು ದಾರಿ ತೋರಿಸುವ ಕುತ್ತಾರಿನ ದುರ್ಗಾವಾಹಿನಿ ಮಹಿಳಾ ಮಂಡಲ ಬಡ ಹೆಣ್ಮಕ್ಕಳ, ನಿರ್ಗತಿಕರಿಗೆ ಸಹಾಯ ಮಾಡುವುದರ ಜತೆಗೆ ಸಾಮಾಜಿಕವಾಗಿ ತೊಡಗಿಸಿಕೊಂಡು ಸಮಾಜಮುಖಿಯಾಗಿದೆ ಎಂದು ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಹೇಳಿದ್ದಾರೆ.

ಅವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ಒಂದು ತಿಂಗಳ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದುಸ್ತಾನ್ ಲಿವರ್ ಲಿ. ಇದರ ಲೇಬರ್ ನೆಟ್ ಪ್ರಭಾತ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಡಿಯಲ್ಲಿ ನಡೆದ ಎಂಬ್ರಾಯಿಡರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ಕಲಾವಿದ ಹಾಗೂ ತರಬೇತುದಾರ ದಯಾನಂದ ಗಟ್ಟಿ ಪಿಲಿಕೂರು ಮಾತನಾಡಿ ಮಹಿಳಾ ಮಂಡಲದಲ್ಲಿ ಯಕ್ಷಗಾನ ತರಬೇತಿ ಮುಂದೆ ನಡೆಯಲಿದ್ದು, ಗಂಡು ಕಲೆ ಯಕ್ಷಗಾನ ಆಗಿದ್ದರೂ ಮಹಿಳೆಯರು, ಹೆಣ್ಮಕ್ಕಳು ಕಲೆಯಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ವ್ಯಾಯಾಮ ಸಿಗಲು ಸಾಧ್ಯ ಎಂದರು.

ಲೇಬರ್ ನೆಟ್ ಇದರ ಸಂಯೋಜಕ ಸತ್ಯೇಂದ್ರ ಪ್ರಕಾಶ್ ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಬೇಕು ಅನ್ನುವ ಉದ್ದೇಶದೊಂದಿಗೆ ದೇಶಾದ್ಯಂತ ಲೇಬರ್ ನೆಟ್ ನ 170 ಶಾಖೆಗಳು ಕಾರ್ಯಾಚರಿಸುತ್ತಿವೆ. ಸರಕಾರದ ವಿವಿಧ ಕಾರ್ಯಕ್ರಮಗಳ ಜತೆಗೆ ಕೈಜೋಡಿಸುತ್ತಾ ಮಹಿಳೆಯರಿಗಾಗಿ ಟೈಲರಿಂಗ್, ಬ್ಯೂಟೀಷಿಯನ್ ತರಬೇತಿಗಳನ್ನು ನೀಡುತ್ತಾ ಬಂದಿದೆ. ದೇಶಾದ್ಯಂತ ಸ್ಕಿಲ್ ಇಂಡಿಯಾ ಮಿಷನ್ ಜತೆಗೆ ಕೈಜೋಡಿಸಿರುವ ಸಂಸ್ಥೆ ಮಹಿಳೆಯರು ಸ್ವಾವಲಂಬಿಯಾಗುವ ಪ್ರಯತ್ನ ನಡೆಸುತ್ತಿದೆ ಎಂದರು. ವೇದಿಕೆಯಲ್ಲಿ ದುರ್ಗಾವಾಹಿನಿ ಮಹಿಳಾ ಮಂಡಲದ ಉಪಾಧ್ಯಕ್ಷೆ ತಂಗಮ್ಮ , ಖಜಾಂಚಿ ವೇದ ಪವಿತ್ರ ಗಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ಎಂಬ್ರಾಯಿಡರಿ ಶಿಕ್ಷಕಿ ಸವಿತಾ ಸನಿಲ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶಲತಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ವಂದಿಸಿದರು.

Exit mobile version