Site icon Ullalavani

ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳ ಜತೆಗೆ ಓಟಕ್ಕಿತ್ತ ಸಚಿವ ಖಾದರ್

UN NETWORKS

ಕೊಣಾಜೆ: ಕಾಲೇಜು ವಿದ್ಯಾರ್ಥಿಗಳ ಜತೆಗೆ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಿದ್ದ ಸಚಿವರು ಇಂದು ಕೂಡಾ ಅದನ್ನೇ ಮುಂದುವರಿಸಿ ಟಿಲ್ಲರ್ ಚಲಾಯಿಸಿದರಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಕೃಷಿಪಾಠ ನೀಡುವುದರ ಜತೆಗೆ ವಿದ್ಯಾರ್ಥಿಗಳ ಜತೆಗೆ ಗದ್ದೆಯಲ್ಲಿ ಓಟ ನಡೆಸಿ ಅತಿಸಾಮಾನ್ಯರಂತೆ ಕಂಡುಬಂದ ಆಹಾರ ಸಚಿವರು ಆಹಾರ ಬೆಳೆಸುವ ಕಾಯಕಕ್ಕೆ ಪ್ರೋತ್ಸಾಹ ನೀಡಿದರು.

ಇದು ಡಾ.ಪಿ. ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ರೆಡ್ ರಿಬ್ಬನ್, ಕೊಣಾಜೆ ಗ್ರಾಮ ಪಂಚಾಯತ್, ರೈತ ಸಂಘ ಹಸಿರುಸೇನೆ , ಮಾಧ್ಯಮ ಕೇಂದ್ರ ತೊಕ್ಕೊಟ್ಟು ಹಾಗೂ ಮಂಗಳೂರು ವಿ.ವಿಯ ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಮಂಗಳಗಂಗೋತ್ರಿ ಇವುಗಳ ಜಂಟಿ ಆಶ್ರಯದಲ್ಲಿ ಕೊಣಾಜೆ ಗಟ್ಟಿಮೂಲೆ ಮೇಲ್ಮನೆಯಲ್ಲಿ ವಿದ್ಯಾರ್ಥಿಗಳ ನಡಿಗೆ ರೈತರ ಹಡಿಲು ಭೂಮಿಯ ಕಡೆಗೆ ಇದರ ಅಂಗವಾಗಿ ಕೃಷಿ ಸಂವಾದ ಮುಂಗಾರಿನ ನಾಟಿಯ ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ ಸಚಿವರ ವಿವಿಧ ಚಟುವಟಿಕೆಗಳು ರೈತರಿಗೆ ಪ್ರೋತ್ಸಾಹ ನೀಡಿತು.

ಕೊಣಾಜೆ ಎರಡನೇ ವಾರ್ಡನ್ನು ದತ್ತು ಪಡೆದ ಕಾಲೇಜು ವಿದ್ಯಾರ್ಥಿಗಳು ಪರಿಸರಕ್ಕೆ ಪೂರಕವಾದ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಪ್ರತಿ ಶನಿವಾರದಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್‍ಗೆ ಸೇರಿದ ವಿದ್ಯಾರ್ಥಿಗಳು ಗಿಡ ನೆಡುವುದು, ಹಡಿಲು ಬಿದ್ದ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳವುದು ಮಾಡುತ್ತಲೇ ಬಂದಿದ್ದಾರೆ.

ಇಂದು ಕೂಡ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಜತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಭಾಗವಹಿಸಿದ್ದರಲ್ಲದೆ, ಮಂಗಳೂರು ವಿ.ವಿ ಅಧ್ಯಯನದ ವಿದೇಶಿ ವಿದ್ಯಾರ್ಥಿಗಳಿಗೆ ನಾಟಿ ಕಾರ್ಯ ಮಾಡುವುದರ ಕುರಿತು ಅಂಗ್ಲ ಭಾಷೆಯಲ್ಲಿ ಮಾಹಿತಿ ನೀಡಿದರು. ಅವರ ಜತೆಗೆ ನಾಟಿ ಕಾರ್ಯವನ್ನು ನಡೆಸಿದರು. ಈ ನಡುವೆ ಒಂದೂವರೆ ಎಕರೆಯ ಗದ್ದೆಯಲ್ಲಿ ಅರ್ಧ ಎಕರೆಯಲ್ಲಿ ಟಿಲ್ಲರ್ ಮೂಲಕ ಅರ್ಧ ಗಂಟೆಯ ಕಾಲ ಉಳುಮೆ ನಡೆಸಿ ನೆರೆದವರನ್ನು ಆಶ್ಚರ್ಯ ಚಕಿತರನ್ನಾಗಿಸಿದರು. ಅಷ್ಟಕ್ಕೇ ಸುಸ್ತಾಗದ ಸಚಿವರು ಧರಿಸಿದ್ದ ಬಿಳಿ ಬಟ್ಟೆಯನ್ನು ಲೆಕ್ಕಿಸದೆ ಗದ್ದೆಯಲ್ಲಿ ವಿದ್ಯಾರ್ಥಿಗಳ ಜತೆಗೆ ಓಟಕ್ಕೆ ನಿಂತು ವಿದ್ಯಾರ್ಥಿಗಳನ್ನು ಓಟದಲ್ಲಿ ಮೀರಿಸುವಲ್ಲಿ ಯಶಸ್ವಿಯಾದರು. ಓಡುವ ರಭಸದಲ್ಲಿ ಗದ್ದೆಯಲ್ಲಿ ಉರುಳಿಬಿದ್ದ ಸಚಿವರ ಮೇಲೆ ವಿದ್ಯಾರ್ಥಿಗಳು ಬಿದ್ದರಲ್ಲದೆ, ಮಕ್ಕಳ ಜತೆಗೆ ಮಕ್ಕಳಾಗಿಯೇ ಸಚಿವರು ಕಂಡುಬಂದರು.

ಮೈಪೂರ್ತಿ ಕೆಸರಾಗಿ ಗುರುತು ಸಿಗದಂತಾದ ಸಚಿವರ ಕೆಸರಿನಾಟ ಕೊಣಾಜೆ ಗ್ರಾಮಸ್ಥರನ್ನು ಕೆಲಕಾಲ ದಂಗುಬಡಿಸಿತು. ರೈತರಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯ ನಡೆದಿದೆ. ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೃಷಿಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಕುರಿತು ಸರಕಾರದ ಗಮನ ಸೆಳೆಯುತ್ತೇನೆ. ಇದರಿಂದ ಕೃಷಿಕರಿಗೆ ಪ್ರೋತ್ಸಾಹ ದೊರೆಯುವುದಲ್ಲದೆ, ಹಡಿಲು ಬಿದ್ದ ಗದ್ದೆಗಳಲ್ಲಿ ಪುನಶ್ಚೇತನ ಕಾಣುವುದರೊಂದಿಗೆ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಶನಿವಾರ ಗದ್ದೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರು ವಿ.ವಿ ಕುಲಪತಿ ಪ್ರೊ.ಕೆ.ಭೈರಪ್ಪ ಉದ್ಘಾಟಿಸಿದರು. ಡಾ.ಪಿ. ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇದರ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್.ಸಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಉದಯಶಂಕರ್ .ಹೆಚ್, ಮಂಗಳೂರು ವಿ.ವಿಯ ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಮಂಗಳಗಂಗೋತ್ರಿ ಡಾ.ರವಿಶಂಕರ್ ರಾವ್, ಕೊಣಾಜೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ, ರೈತ ಸಂಘ ಹಸಿರುಸೇನೆಯ ಮನೋಹರ ಶೆಟ್ಟಿ ನಡಿಕಂಬಳ ಗುತ್ತು, ಮಂಗಳೂರು ವಿ.ವಿ ಕುಲಸಚಿವ ಡಾ.ಕೆ.ಎಂ ಲೋಕೇಶ್, ರಥಬೀದಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ನವೀನ್ ಎನ್ ಕೊಣಾಜೆ, ಪ್ರೊ. ಜೆಫ್ರಿ ರೋಡ್ರಿಗಸ್ ಹಾಗೂ ಡಾ.ನಾಗವೇಣಿ ಮಂಚಿ ಉಪಸ್ಥಿತರಿದ್ದರು.

Exit mobile version