Site icon Ullalavani

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಕ್ರಾಂತಿವೀರನ ನೆನಪು

UN NETWORKS

ತೊಕ್ಕೊಟ್ಟು: ಭಾರತದ ಯುವಜನತೆಯ ಪೌರುಷ, ಶತ್ರು ರಾಷ್ಟ್ರದ ವಿರುದ್ಧ ಎದೆಗುಂದದ ಹೋರಾಟ ಎಂಥದ್ದು ಎಂಬುದನ್ನು ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಜಗತ್ತಿಗೆ ಪಸರಿಸಿದ ಮಹಾನ್ ಚೇತನ ಭಗತ್ ಸಿಂಗ್‍ನದ್ದು ವಿಶಿಷ್ಠ ವ್ಯಕ್ತಿತ್ವ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ನ್ಯಾಯವಾದಿ ಕೆ. ಮೋನಪ್ಪ ಭಂಡಾರಿ ಅಭಿಪ್ರಾಯ ಪಟ್ಟರು.

ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ ಪ್ರಯುಕ್ತ ಕೊಲ್ಯ ಸೌಭಾಗ್ಯಸದನದಲ್ಲಿ ಭಾನುವಾರ ನಡೆದ `ಕ್ರಾಂತಿವೀರನ ನೆನಪು’ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಮ್ಮ ಮಕ್ಕಳಿಗೆ ದೇಶಪ್ರೇಮಿಗಳು ಸ್ಪೂರ್ತಿಯಾಗಬೇಕು. ಸಿನಿಮಾ ನೋಡಲಿ ತಪ್ಪಿಲ್ಲ. ಆದರೆ ನಟರನ್ನೇ ಸ್ಪೂರ್ತಿ ಯಾಗಿ ತೆಗೆದುಕೊಳ್ಳಬಾರದು. ಅವರ ನಟರಷ್ಟೆ. ನಿಜವಾದ ಹೀರೋಗಳು ನಮ್ಮ ಸೈನಿಕರು. ನಮ್ಮದು ಭಗತ್ ಸಿಂಗ್ ಸಂಸ್ಕಾರ. ಭಗತ್ ಸಿಂಗ್ ವೀರ ಪುರುಷ ಎಂಬ ಭಾವನೆ ನಮ್ಮಲ್ಲಿ ಸದಾ ಮೂಡಬೇಕು. ಹಾಗಾಗಿ ಭಗತ್ ಸಿಂಗ್ ರಂತಹ ಕ್ರಾಂತಿಕಾರಿ ಹೋರಾಟಗಾರ ಜನನ ಪ್ರತಿ ಮನೆ ಮನದಲ್ಲಾಗಲಿ ಎಂದು ಆಶಿಸಿದರು.

ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರ ಕಲಿಸಿಕೊಡಬೇಕು. ದೇಶದ ಸ್ವಾತಂತ್ರ್ಯ ಚಿತ್ರಣ ಕೊಡಬೇಕು. ವೀರ ಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಪೋಷಕರು ಮಕ್ಕಳಿಗೆ ಮಾಹಿತಿ ನೀಡುವುದರಿಂದ ಬಾಲ್ಯದಿಂದಲೇ ದೇಶ ಪ್ರೇಮ ಬೆಳೆಸಿಕೊಳ್ಳಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಲ್ಯ ಶ್ರೀ ನಾಗಬ್ರಹ್ಮ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್ ಮಾತನಾಡಿ ಪ್ರತಿಷ್ಠಾನ ಉದ್ಘಾಟನೆ ಭಾಗ್ಯ ಕಂಡಿದ್ದು ನಾಗಬ್ರಹ್ಮ ಕ್ಷೇತ್ರ ಸನ್ನಿಧಾನದಲ್ಲಿಯೇ ಆಗಿದ್ದು ದಶಮ ಸಂಭ್ರಮ ಪ್ರಯುಕ್ತ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ತೊಕ್ಕೊಟ್ಟಿನ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಮಾಜಿ ಅಧ್ಯಕ್ಷ ದೇವದಾಸ ಶ್ರೀಯಾನ್, ತೊಕ್ಕೊಟ್ಟು ಗಣೇಶ ನಗರದ ಗಣೇಶ ಸೇವಾ ಮಂದಿರದ ಟಿ. ರಾಮ ಹಾಗೂ ಉದ್ಯಮಿ ಹರೀಶ್ ಉಳ್ಳಾಲಬಬೈಲ್ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಗೌರವ ಸಲಹೆಗಾರ ಆನಂದ ಕೆ. ಅಸೈಗೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ಬಸ್ತಿ ಹಾಗೂ ಕೃಷ್ಣ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ವಂದಿಸಿದರು. ತೀರ್ಪುಗಾರರಾಗಿ ನಾಟೆಕಲ್ ಉರುಮಣೆ ವಸತಿ ಶಾಲಾ ಪ್ರಾಂಶುಪಾಲ ಮುರುಗಯ್ಯ ಹಾಗೂ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾೈ ತೀರ್ಪುಗಾರರಾಗಿ ಸಹಕರಿಸಿದರು.

Exit mobile version