UN NETWORKS
ಕೊಣಾಜೆ: ಓಬೆಲೆ ಲೇಲೆ ಐಲೇ ಸಾ ಐ ಲೇಸಾ… ಹೀಗೆ ವಿದ್ಯಾರ್ಥಿಗಳ ಹಾಗೂ ಕೃಷಿ ಕಾರ್ಯದಲ್ಲಿ ತೊಡಗಿಕೊಂಡವರ ಜತೆಗೆ ಜಾನಪದ ಪದಗಳೊಂದಿಗೆ ದನಿಗೂಡಿಸಿ ನಾಟಿ ಕೆಲಸದಲ್ಲಿ ತೊಡಗಿಸಿಕೊಂಡವರು ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಇವರು ಕೊಣಾಜೆಯ ಅಣ್ಣೆರೆಪಾಲು ಗದ್ದೆಯಲ್ಲಿ ಮಂಗಳೂರು ರಥಬೀದಿಯ ಡಾ.ಪಿ. ದಯಾನಂದ ಪೈ, ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ರೆಡ್ ರಿಬ್ಬನ್ ಮತ್ತು ಕೊಣಾಜೆ ಗ್ರಾಮ ಪಂಚಾಯತ್ , ರೈತ ಸಂಘ ಹಸಿರು ಸೇನೆ , ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾದ ಸಚಿವರು ತಡವಾಗಿ ಆಗಮಿಸಿ, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಿದ್ಯಾರ್ಥಿಗಳ ಜತೆಗಿನ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಕೃಷಿ ಕೆಲಸಕ್ಕೆ ಸ್ಪೂರ್ತಿ ತುಂಬಿದರು.
ಟ್ರಾಫಿಕ್ ನಿರ್ವಹಿಸಿ, ಬಸ್ಸನ್ನು ಚಲಾಯಿಸಿ, ಬುಲ್ಡೋಜರ್ ನ್ನೂ ಚಲಾಯಿಸಿ ಸದಾ ಸುದ್ಧಿಯಲ್ಲಿರುವ ಸಚಿವರು, ಭಾನುವಾರ ಕೊಣಾಜೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.
ಸ್ಥಳೀಯ ಮುಖಂಡರ ಜತೆಗೆ ಗದ್ದೆಗಿಳಿದ ಸಚಿವರು, ವಿದ್ಯಾರ್ಥಿಗಳು ನಡೆಸುತ್ತಿದ್ದ ನಾಟಿ ಕಾರ್ಯದಲ್ಲಿ ಕೈಜೋಡಿಸಿದರು. ಕೆಸರುತುಂಬಿದ್ದ ಗದ್ದೆಯಲ್ಲಿ ಬಿಳಿ ಬಟ್ಟೆಯಲ್ಲೇ ನೇಜಿಯನ್ನು ಕೈಯಲ್ಲಿ ಹಿಡಿದುಕೊಂಡು ನೆಡಲು ಆರಂಭಿಸಿದರು. ಈ ವೇಳೆ ಎಪಿಎಂಸಿ ಉಪಾಧ್ಯಕ್ಷೆ ಹಾಗೂ ಕೊಣಾಜೆ ಗ್ರಾ.ಪಂ ಸದಸ್ಯೆ ಮುತ್ತು ಶೆಟ್ಟಿ ಇವರ ಪಾಡ್ದನ ಮತ್ತು ತುಳು ಪದಕ್ಕೆ ದನಿಗೂಡಿಸಿದ ಸಚಿವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಬಳಿಕ ಮಾತನಾಡಿದ ಸಚಿವರು ಆಧುನಿಕ ಮತ್ತು ವೈಜ್ಞಾನಿಕ ಕಾಲದಲ್ಲಿ ಕೃಷಿ ಚಟುವಟಿಕೆ ನಶಿಸಿ ಹೋಗುತ್ತಿದೆ. ಆದರೆ ಯುವ ವಿದ್ಯಾರ್ಥಿಗಳ ಮೂಲಕವೇ ಬರಡಾದ ಭೂಮಿಗೆ ಮತ್ತೆ ಫಲಕೊಡುವ ಕೆಲಸವನ್ನು ಮಾಡಿಸುತ್ತಿರುವುದು ವಿಶೇಷ ಕಾರ್ಯಕ್ರಮ . ಈ ಮೂಲಕ ಜಿಲ್ಲೆಯ ಮಣ್ಣಿನ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸವಾಗಿದೆ. ಗದ್ದೆಯನ್ನು ಉಪಯೋಗಿಸದೆ ಬರಡಾಗಿ ಬಿದ್ದ ಭೂಮಿಯನ್ನು ಪುನರ್ ಜೀವನ ಕೊಡುವುದರ ಮೂಲಕ ರೈತರಿಗೆ ಪ್ರೋತ್ಸಾಹವನ್ನು ಕಾರ್ಯಕ್ರಮ ನೀಡುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸುವಂತಹದ್ದು, ತನ್ನ ಕ್ಷೇತ್ರದಲ್ಲಿ ಇಂತಹ ಕಾರ್ಯ ನಡೆಯುತ್ತಿರುವುದು ಸಂತಸವಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ತೆರಳುವ ವೇಳೆ ಗದ್ದೆಗಳು ಮಾಯವಾಗುತ್ತಿದೆ ಅನ್ನುವ ಭಯ ಹುಟ್ಟುತಿತ್ತು, ಆದರೆ ಇಂತಹ ಹಡೀಲು ಬಿದ್ದ ಗದ್ದೆಗಳಲ್ಲಿ ಮತ್ತೆ ಕೆಲಸವನ್ನು ಆರಂಭಿಸಿರುವುದು ಕೃಷಿ ಕ್ಷೇತ್ರಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದರು.
ವಿದ್ಯಾರ್ಥಿಗಳಿಂದ ವಿಶಿಷ್ಟ ಕಾರ್ಯ : ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಈ ಕಾರ್ಯ ವಿಶಿಷ್ಟವಾಗಿದೆ. ಕಳೆದ ಮೂರು ತಿಂಗಳಿನಿಂದ ಕೊಣಾಜೆ ಗ್ರಾಮ ಪಂಚಾಯಿತಿನ ಪುರುಷಕೋಡಿ, ಅಣ್ಣೆರೆಪಾಲು, ದೇವಂದಬೆಟ್ಟ, ಕೊಪ್ಪಳ, ಮೇಲ್ಮನೆ ಗಟ್ಟಿಮೂಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ನಿರ್ಮಾಣ, ಸ್ವಚ್ಛತೆ, ಕೆರೆ ನಿರ್ಮಾಣ ಮತ್ತು ಗ್ರಾಮದ ಸರ್ವೇ ಕಾರ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ವಾರದಲ್ಲಿ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿ ತೊಡಗಿಸಿಕೊಂಡ ವಿದ್ಯಾರ್ಥಿಗಳು, ದತ್ತು ಪಡೆದುಕೊಂಡ ಗ್ರಾಮದ ಹಲವು ಹಡೀಲು ಬಿದ್ದ ಗದ್ದೆಗಳನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಭಾನುವಾರ ಕಾರ್ಯಕ್ರಮ ನಡೆದಿದೆ.
ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್.ಸಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಯಾದ ಡಾ.ನವೀನ್.ಎನ್ ಕೊಣಾಜೆ, ಉಪನ್ಯಾಸಕರಾದ ಪ್ರೊ. ಜೆಫ್ರಿ ರಾಡ್ರಿಗಸ್, ಡಾ.ನಾಗವೇಣಿ ಮಂಚಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.