UN NETWORKS
ಉಳ್ಳಾಲ: ಕೇಂದ್ರ ಸಾಹಿತ್ಯ ಅಕಾಡಮಿ ವತಿಯಿಂದ ತುಳು ಭಾಷೆಗೆ ನೀಡಿದ ಕೊಡುಗೆಗಾಗಿ ಪ್ರೋ. ಅಮೃತ ಸೋಮೇಶ್ವರ ಅವರಿಗೆ ನೀಡಲಾದ ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ನಿಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರಧಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ ಪಾಡ್ದನಗಳನ್ನು ಅನುವಾದ ಮಾಡಿ ಕನ್ನಡಕ್ಕೆ ಭಾಷಾಂತರ ನಡೆಸಿದ ಅಮೃತ ಸೋಮೇಶ್ವರ ಜತೆಗಿನ 30 ವರ್ಷಗಳ ಸ್ನೇಹ. ಸಿರಿ ಪಾಡ್ದನ ಸೇರಿದಂತೆ ತನ್ನ ಕೃತಿಯನ್ನು ತುಳುವಿಗೆ ಅನುವಾದಿಸಿದ ಕೀರ್ತಿ ಅಮೃತ ಸೋಮೇಶ್ವರ ಅವರಿಗೆ ಸಲ್ಲುತ್ತದೆ. ಸೋಮೇಶ್ವರ್ ಅವರ ಕೃತಿಗಳು ಯಕ್ಷಗಾನದ, ಕನ್ನಡ ಮತ್ತು ತುಳು ಭಾಷಾ ಕೃತಿಗಳು ಮೂರು ಸಂಪುಟಗಳಲ್ಲಿ ಬಿಡುಗಡೆ ಮಾಡಬೇಕಿದೆ ಎಂದ ಅವರು ಆಸ್ಪತ್ರೆಯಲ್ಲಿದ್ದಾರೆ ಅನ್ನುವ ವಿಚಾರ ಆಘಾತ ತಂದಿತು. ಆದರೆ ನಗುಮುಖವನ್ನು ನೋಡಿ ಅವರು ಇನ್ನಷ್ಟು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ ಅನ್ನುವ ವಿಶ್ವಾಸವಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ಮಾತನಾಡಿ ಶ್ರೇಷ್ಟ ವಾಗ್ಮಿ, ತುಳು ಭಾಷೆಗೆ ನೀಡಿದಂತಹ ಸಹಕಾರ ಸಮಾಜ ಖಂಡಿತ ಮರೆಯುವುದಿಲ್ಲ, ನಿಟ್ಟೆ ವಿ.ವಿ. ಅಕಾಡೆಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ತುಳು ಭಾಷೆಗೆ ಕೊಟ್ಟ ಗೌರವವಾಗಿದೆ. ಅನರಾರೋಗ್ಯದಿಂದ ಇರುವ ಅಮೃತ ಸೋಮೇಶ್ವರ್ ಅವರು ಸಮಾಜಕ್ಕೆ ಇನ್ನೂ ಬೇಕಾದಂತಹ ಕಾರ್ಯಕ್ರಮವನ್ನು ಮಾಡಲಿ. ಸಮಾಜ ಅವರು ಮಾಡಿದ ಕಾರ್ಯವನ್ನು ನೆನಪಿನಲ್ಲಿಡುವಂತಹ ಕಾರ್ಯಕ್ರಮಗಳು ಆಗಬೇಕಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ್ ಅವರು ಮಾತನಾಡಿ ಬಂಧುಗಳು, ಹಿತೈಷಿ, ಸ್ನೇಹಿತರ ಪ್ರೋತ್ಸಾಹದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಯಿತು. ತುಳು ಮತ್ತು ಕನ್ನಡ ಭಾಷಾ ಸಾಹಿತ್ಯಗಳ ಮೇಲಿನ ಸೇವೆಯನ್ನು ಇನ್ನಷ್ಟು ನೆರವೇರಿಸಲು ಆಸಕ್ತಿ ಇದೆ. ಪ್ರಶಸ್ತಿ ಅನಿರೀಕ್ಷಿತವಾದ ಪ್ರಸಂಗ ಎಂದರು. ಬದುಕಿನ ಸತ್ವಗಳನ್ನು ಜೀವಂತವಾಗಿ ಸಾಹಿತ್ಯದಲ್ಲಿ ತೋರಿಸಿದ ಕಂಬಾರರಂತಹ ಖ್ಯಾತ ಸಾಹಿತಿಗಳ ಕೂಡುವಿಕೆಯಲ್ಲಿ ನಡೆದ ಕಾರ್ಯಕ್ರಮ ಖುಷಿ ಕೊಟ್ಟಿದೆ ಎಂದರು.
ಡಾ| ಅಮೃತ ಸೋಮೇಶ್ವರರ ಪತ್ನಿ ನರ್ಮದಾ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾ„ಪತಿ ಡಾ|ಎನ್.ವಿನಯ್ ಹೆಗ್ಡೆ, ಸಹಕುಲಾಧಿಪತಿ ಡಾ|ಎಂ.ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಎಸ್.ರಮಾನಂದ ಶೆಟ್ಟಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ| ಸತೀಶ್ ಭಂಡಾರಿ, ಕುಲಸಚಿವರಾದ ಡಾ|ಎಂ.ಎಸ್.ಮೂಡಿತ್ತಾಯ, ಕ್ಷೇಮ ರಿಜಿಸ್ಟ್ರಾರ್ ಡಾ| ಜಯಪ್ರಕಾಶ್ ಶೆಟ್ಟಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಪಿ.ಮಹಾಲಿಂಗೇಶ್ವರ ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ|ನಾ.ದಾಮೋದರ ಶೆಟ್ಟಿ ಸ್ವಾಗತಿಸಿದರು. ಆಯ್ಕೆ ಸಮಿತಿಯ ಡಾ| ಚಿನ್ನಪ್ಪ ಗೌಡ ವಂದಿಸಿದರು. ಪ್ರಾಧ್ಯಾಪಕಿ ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.