UN NETWORKS
ಹರೇಕಳ : ಸ್ಕೂಲ್‍ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮಂಗಳೂರಿನ ಎನ್.ಎಸ್.ಎಸ್. ಘಟಕ, ಗ್ರಾಮೀಣ ಅಭಿವೃದ್ಧಿ ವಿಭಾಗ ಹಾಗೂ ಕ್ರೀಡಾ ವಿಭಾಗದ ಜಂಟಿ ಆಶ್ರಯದಲ್ಲಿ ಮತ್ತು ವಿಜಯಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನದ ಸಹಯೋಗದೊಂದಿಗೆ ದೆಬ್ಬೇಲಿ ಹರೇಕಳ ಪಂಚಾಯಿತಿ ಬಳಿ ಒಂದು ದಿನದ `ಗ್ರಾಮೀಣ ಕ್ರೀಡೆ-2017’ ಕಾರ್ಯಕ್ರಮವು ಭಾನುವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಹೆಗ್ಡೆ ಅವರು, ಇಂದು ನಾವು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದ್ದರೂ ನಮ್ಮ ಗ್ರಾಮೀಣ ಸಂಸ್ಕøತಿ, ಸೊಗಡನ್ನು ಎಂದಿಗೂ ಮರೆಯಬಾರದು ಎಂದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಅವರು ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಇಂದು ಜನರು ಗ್ರಾಮೀಣ ಕ್ರೀಡೆಯಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕøತಿಯ ಮಹತ್ವವನ್ನು ಮುಂದಿನ ಜನಾಂಗಕ್ಕೂ ತಿಳಿಯಪಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ, ಕೊಣಾಜೆ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಾರಾಂ ರೈ, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಬದ್ರುದ್ದೀನ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜಕರಾದ ಪ್ರೋ. ವಿನೀತಾ ರೈ ಮೊದಲಾದವರು ಉಪಸ್ಥಿತರಿದ್ದರು.
ರೋಶನಿ ನಿಲಯ ಕಾಲೇಜಿನಎನ್.ಎಸ್.ಎಸ್. ಘಟಕದ ಅಧಿಕಾರಿಯಾದ ಪ್ರೋ. ಸಿಸೀಲಿಯಾ ಗೋವಿಯಸ್ ಅವರು ಸ್ವಾಗತಿಸಿದರು. ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಪ್ರೋ ಅನುರಾಧ ಶೆಟ್ಟಿಯವರು ಗ್ರಾಮೀಣಕ್ರೀಡೆ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್ ಉಳ್ಳಾಲ್ ವಂದಿಸಿದರು. ವಿಧ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ದೆಗಳಾದ ಓಟ, ಹಗ್ಗ ಜಗ್ಗಾಟ, ಕ್ವಿಜ್, ತ್ರೋಬಾಲ್, ಹೂ ಕಟ್ಟುವುದು, ತೆಂಗಿನಗರಿ ನೇಯುವುದು, ತೆಂಗಿನಗರಿಯಿಂದ ಹಿಡಿಸೂಡಿ ಮಾಡುವುದು, ಇಂತಹ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.