Site icon Ullalavani

ರ್ಯಾಲಿಗೆ ಉಳ್ಳಾಲದಿಂದ 4,000 ಬೈಕ್ ಗಳು

UN NETWORKS

ಉಳ್ಳಾಲ; ಬೈಕ್ ರ್ಯಾಲಿಯಲ್ಲಿ ಮಂಗಳೂರು ಕ್ಷೇತ್ರದಿಂದ 4,000ದಷ್ಟು ಬೈಕಿನಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಎಷ್ಟು ತಡೆದರೂ ಸಾಂವಿಧಾನಿಕ ಹಕ್ಕಾದ ಪ್ರತಿಭಟನೆಯನ್ನು ಯುವ ಕಾರ್ಯಕರ್ತರು ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳ ನೇತೃತ್ವದಲ್ಲಿ ಮಾಡಿಯೇ ಸಿದ್ಧ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.

ತೊಕ್ಕೊಟ್ಟು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರದ ಎಷ್ಟು ಪೊಲೀಸರು ಕಾರ್ಯಚರಿಸಿದರೂ, ಎಷ್ಟೇ ಕಾರ್ಯಕರ್ತರ ಬಂಧನವಾದರೂ ಎದೆಗುಂದದೆ ಬೈಕ್ ರ್ಯಾಲಿಯನ್ನು ನಡೆಸಿಯೇ ನಡೆಸುತ್ತೇವೆ. ಉಳ್ಳಾಲದ 195 ಬೂತ್ ಗಳಿಂದ 2,200 ಬೈಕ್ ಸೇರಿದಂತೆ ಒಟ್ಟು 4,000 ಬೈಕ್ ಗಳಲ್ಲಿ ಕಾರ್ಯಕರ್ತರು ರ್ಯಾಲಿ ಮೂಲಕ ಭಾಗವಹಿಸಲಿದ್ದಾರೆ. ಹಿಂದು ವಿರೋಧಿ ಧೋರಣೆಯನ್ನು ತೋರಿಸುತ್ತಿರುವ ಸರಕಾರ ಮತ್ತು ಉಸ್ತುವಾರಿ ಸಚಿವ ರೈ ವಿರುದ್ಧದ ಹಾಗೂ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನೆಯಾಗಿದೆ. ಅಲ್ಲದೆ ಹಿಂದು ಕಾರ್ಯಕರ್ತರ ಸರಣಿ ಹತ್ಯೆ ನಡೆಸುತ್ತಿರುವ ಪಿಎಫ್ ಐ , ಕೆಎಫ್ ಡಿ ನಿಷೇಧಕ್ಕೆ ಆಗ್ರಹಿಸಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಸಾಂವಿಧಾನಿಕ ಹಕ್ಕಾದ ಪ್ರತಿಭಟನೆಯನ್ನು ನಿಲ್ಲಿಸುವುದು ಸರಿಯಲ್ಲ.

ಶಾಂತಿಯುತವಾಗಿ ನಡೆಯುವ ಪ್ರತಿಭಟನೆಗೆ ಅಡ್ಡಿಯುಂಟು ಮಾಡಿದಲ್ಲಿ, ಮುಂದೆ ನಡೆಯುವ ಕಾಂಗ್ರಸ್ ನ ಶಾಂತಿಗಾಗಿ ಪಾದಯಾತ್ರೆಗೆ ತೊಂದರೆಯಾಗಬಹುದು. ಹಿಂದೆ ಬಿಜೆಪಿ ಸರಕಾರವಿದ್ದಾಗ ಉಳ್ಳಾಲದಿಂದ ಬಳ್ಳಾರಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬಿಜೆಪಿ ಸರಕಾರವೇ ಭದ್ರತೆಯನ್ನು ಒದಗಿಸಿತ್ತು. ಆದರೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಭದ್ರತೆ ಒದಗಿಸಲಾಗದವರು ಅಡ್ಡಿಪಡಿಸುವುದರಲ್ಲಿ ಅರ್ಥವಿಲ್ಲ. ಯುವಮೋರ್ಚಾದ ಯುವ ಕಾರ್ಯಕರ್ತರು ಯಾರಿಗೂ ಬಗ್ಗುವವರಲ್ಲ, ಜಗ್ಗುವವರಲ್ಲ ಎದೆಯೊಡ್ಡಿ ನಿಲ್ಲುವವರು. ಯಾವುದೇ ಧರ್ಮದ ವಿರುದ್ಧ ಹೋರಾಟವಲ್ಲ, ಶಾಂತಿಯುತವಾದ ಹೋರಾಟವಾಗಿದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಯುವಮೋರ್ಚಾ ಅಧ್ಯಕ್ಷ ಸುಜಿತ್ ಮಾಡೂರು, ಮನೋಜ್ ಆಚಾರ್ಯ ಉಪಸ್ಥಿತರಿದ್ದರು.

Exit mobile version