UN NETWORKS
ಸೋಮೇಶ್ವರ: ಧಾರ್ಮಿಕ ಕ್ಷೇತ್ರಗಳಲ್ಲಿ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ಮಂದಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ, ದೇವಸ್ಥಾನಗಳಲ್ಲಿರುವ ಅರ್ಚಕರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ವೀಳ್ಯಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ಮಾಸಿಕ 7,000 ರೂ. ವೇತನ ಪಡೆಯುತ್ತಿದ್ದ ಅರ್ಚಕರಿಗೆ 14,000 ದಷ್ಟು ವೇತನ ಜಾಸ್ತಿ ಮಾಡಲಾಗಿದ್ದು, ಅಲ್ಲದೆ ವಾರ್ಷಿಕ ಭಡ್ತಿಯನ್ನು ರೂ. 28,000 ದಿಂದ ರೂ. 48,000 ಕ್ಕೆ ರಾಜ್ಯ ಸರಕಾರ ಏರಿಕೆ ಮಾಡಿದೆ. ಹಿಂದಿನ ಸರಕಾರ ನಡೆಸಿದ ಧಾರ್ಮಿಕ ದತ್ತಿ ತಿದ್ದುಪಡಿಯಿಂದಾಗಿ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಒಂದೇ ಕಾನೂನು ಜಾರಿಯಾಗಿದೆ. ಇದರಿಂದಾಗಿ ವಿವಿದೆಡೆ ಇರುವ ಸ್ಥಳ ಹಾಗೂ ಆಚರಣೆಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಸರಕಾರ ಮುಂದೆ ನಿಂತು ಧಾರ್ಮಿಕ ಕ್ಷೇತ್ರಗಳ ಜತೆಗೆ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದು, ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸಬೇಕಿದೆ ಎಂದರು.
ಸೋಮೇಶ್ವರ- ತೊಕ್ಕೊಟ್ಟು ರಸ್ತೆ ಕಾಂಕ್ರೀಟಿಕರಣ : ಸೋಮೇಶ್ವರ ದೇವಸ್ಥಾನದಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ವರೆಗಿನ ರಸ್ತೆ ಕಾಂಕ್ರೀಟಿಕರಣಕ್ಕೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿ ವರ್ಷ ಕಳೆದಿದೆ. ತಾಂತ್ರಿಕ ಅಡಚಣೆಯಿಂದಾಗಿ ಕಾಮಗಾರಿ ಸಾಧ್ಯವಾಗಲಿಲ್ಲ, ಅದಕ್ಕಾಗಿ ಮರುಡಾಮರೀಕರಣ ನಡೆಸಬೇಕಾಯಿತು. ಸೋಮೇಶ್ವರದ ಕೆರೆ ಅಭಿವೃದ್ಧಿಗೆ ರೂ. 1 ಕೋಟಿ, 40 ಲಕ್ಷ ಮಂಜೂರುಗೊಳಿಸಿ ಅಭಿವೃದ್ಧಿಯಾಗಿದೆ. ಮತ್ತೆ ಕರೆಯ ಸುತ್ತ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಸೋಮೇಶ್ವರ ಹಿಂದು ರುದ್ರ ಭೂಮಿ ಸ್ಥಾಪನೆಗೆ ಉತ್ತಮ ಕಮಿಟಿಯನ್ನು ಸ್ಥಾಪಿಸಿದಲ್ಲಿ, ಸರಕಾರದಿಂದ ಸಂಪೂರ್ಣ ಸಹಕಾರವನ್ನು ಒದಗಿಸುವುದಾಗಿ ಭರವಸೆ ನೀಡಿದ ಅವರು ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ 16 ಕೋಟಿ ಎಡಿಬಿಯಲ್ಲಿ ಸೇರಿಸಿ ಮುಂದಿನ ವರ್ಷದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿಗಳು ಮೂಲನಂಬಿಕೆ ವಿರೋಧಿಯಲ್ಲ : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಢನಂಬಿಕೆ ವಿರೋಧಿಯಾದರೂ, ಮೂಲನಂಬಿಕೆಗೆ ಬೆಂಬಲಿಸುವವರಾಗಿದ್ದಾರೆ. ಧಾರ್ಮಿಕ ಕ್ಷೇತ್ರಗಳು ಮೂಲನಂಬಿಕೆಗಳಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿರುವುದರಿಂದ ಸರಕಾರದಿಂದ ಸಿಗುವ ಬಹುತೇಕ ಸವಲತ್ತುಗಳನ್ನು ದೊರಕಿಸುವಲ್ಲಿ ಸಫಲರಾಗಿದ್ದಾರೆ ಎಂದರು. ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ವೀಳ್ಯಪ್ರಧಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ರಾಜ್ಯ ಸದಸ್ಯ ಪದ್ಮನಾಭ ಕೋಟ್ಯಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಬೃಹ್ಮರಥ ಕೊಡುಗೆ ನೀಡಿರುವ ರವೀಂದ್ರನಾಥ ರೈ, ವಿಜಯಲಕ್ಷ್ಮೀ ರೈ, ಬ್ರಹ್ಮರಥ ರಚಿಸಲಿರುವ ಶಿಲ್ಪಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮಿ ನಾರಾಯಣ ಆಚಾರ್ಯ, ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ಅರವಿಂದ್ , ಸುಧಾಕರ ಭಂಡಾರಿ, ರಮೇಶ್ ಕೊಲ್ಯ, ಲಕ್ಷ್ಮಿ ಪೂಜಾರಿ, ಪ್ರತಿಭಾ ಯು.ಎಸ್. ರುಕ್ಮಯ್ಯ, ಸೋಮಯ್ಯ ಅಮೀನ್ ಮುಖ್ಯ ಅತಿಥಿಗಳಾಗಿದ್ದರು
ಸೋಮೇಶ್ವರ ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸ್ವಾಗತಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವ ಉಚ್ಚಿಲ್ ವಂದಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವರ ಸನ್ನಿಧಿಯಲ್ಲಿ ಉಳ್ಳಾಲದ ಅಬ್ಬಕ್ಕ ರಾಣಿಯ ಸಮಕ್ಷಮದಲ್ಲಿ ಎಳೆಯುತ್ತಿದ್ದ ಬ್ರಹ್ಮರಥ ಶಿಥಿಲಗೊಂಡಿದ್ದು, ಇದೀಗ ನೂತನವಾಗಿ ಪುನರ್ ನಿರ್ಮಿಸಲು ಉದ್ಯಮಿ ಎನ್. ಮುತ್ತಪ್ಪ ರೈ ಮತ್ತು ಬಿ.ರವೀಂದ್ರನಾಥ ರೈ ಕೊಡುಗೆಯಾಗಿ ನೀಡುತ್ತಿದ್ದಾರೆ. ನಿರ್ಮಾಣ ಸಂದರ್ಭದ ಕೊಟ್ಟಿಗೆಯನ್ನು ಉದ್ಯಮಿ ಶ್ರೀಧರ್ ಭಂಡಾರಿ ಕೊಡುಗೆಯಾಗಿ ನೀಡಲಿದ್ದಾರೆ.