UN NETWORKS
ಮುಡಿಪು: ಒಂದೆಡೆ ಭಜನೆಯ ವಾತಾವರಣ, ಇನ್ನೊಂದೆಡೆ ಸ್ತಬ್ಧಚಿತ್ರಗಳ ಪ್ರದರ್ಶನ, ಹೀಗೆ 100ಕ್ಕೂ ಅಧಿಕ ಹಿಂದೂ ಭಕ್ತರು ಭಾಗವಹಿಸಿದ್ದ ಶೋಭಾಯಾತ್ರೆಯಲ್ಲಿ ಮುಸ್ಲಿಂ ಯುವಕರ ಸಂಘದ ವತಿಯಿಂದ ಮುಸ್ಲಿಂ ಯುವಕರು ಸಿಹಿತಿಂಡಿ ಮತ್ತು ತಂಪುಪಾನೀಯಗಳನ್ನು ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.
ಮುಡಿಪು ಕಾಲೇಜಿನಲ್ಲಿ ನಡೆಯುವ 40 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ನಿಮಿತ್ತ ಕೆಲ ಕಿ.ಮೀ ಉದ್ದಕ್ಕೂ ಕ್ರಮಿಸಿ ದನಿವಾದ ಹಿಂದೂ ಬಾಂಧವರಿಗೆ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ ಸಹಕರಿಸಿದ್ದಾರೆ.
ಮುಡಿಪು ಸರಕಾರಿ ಕಾಲೇಜಿನಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 40 ನೇ ವರ್ಷದ ಆಚರಣೆಯಲ್ಲಿ ಮುಸ್ಲಿಂ ಯುವಕರು ಜತೆಗೂಡಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗೆ ಹಾಗೂ ಸಮಿತಿ ಸದಸ್ಯರಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಗಿದೆ. ಪ್ರಥಮವಾಗಿ ನಡೆಸಿರುವ ಕಾರ್ಯಕ್ರಮ ಎಲ್ಲರಿಗೂ ಸಂತಸ ತಂದಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ ಸಹಕರಿಸಿದ್ದಾರೆ. ಇಂತಹ ಯೋಜನೆಯನ್ನು ರೂಪಿಸಲಾಗಿದೆ. ಪರಿಸರದಲ್ಲಿ ಸೌಹಾರ್ದಕ್ಕೆ ಎಂದಿಗೂ ಧಕ್ಕೆಯಾಗಿಲ್ಲ, ಮುಂದೆಯೂ ಆಗಬಾರದು ಅನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಪ್ರತಿವರ್ಷವೂ ನಡೆಸುವ ಉದ್ದೇಶ ಹೊಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ಹಿಂದು ಮುಸ್ಲಿಂ ಬಾಂಧವರಲ್ಲಿ ಸೌಹಾರ್ದತೆ ಇನ್ನಷ್ಟು ಗಟ್ಟಿಯಾಗಬೇಕಿದೆ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಹೇಳಿದರು.
ಮಹಮ್ಮದ್ ಅಝ್ಗರ್ ಸಾಂಬಾರುತೋಟ, ಬಾಳೆಪುಣಿ ಗ್ರಾ.ಪಂ ಸದಸ್ಯ ಬಶೀರ್ , ಸಿದ್ದೀಖ್ .ಕೆ.ಹೆಚ್, ಅಬ್ದುಲ್ ರೆಹಮಾನ್, ಹನೀಫ್, ಶಮೀಮ್ ಬೋಳಿಯಾರ್, ಎಸ್.ಕೆ.ಖಾದರ್ ಹಾಜಿ, ಮಹಮ್ಮದ್ ಶಾಲಿಮಾರ್, ಸಿರಾಜ್ ಮುಡಿಪು , ಅರಫಾ ಹನೀಫ್, ಯೂಸುಫ್ ಟಿ.ಆರ್, ಹನೀಫ್ ಮುಡಿಪು, ಮುಸ್ತಾಫ ಮುಡಿಪು, ಮಹಮ್ಮದ್ ಗೌಸಿಯಾ ಕಂಪೌಂಡ್, ಎಸ್.ಕೆ.ಪುತ್ತುಬಾವ, ಇರ್ಷಾದ್ ಮುಡಿಪು, ಮೊದಲಾದವರು ಉಪಸ್ಥಿತರಿದ್ದರು.