UN NETWORKS
ಪಾನೀರು : ಶಾಲೆಗಳಲ್ಲಿ ನಾಲ್ಕು ಗೋಡೆಯೊಳಗೆ ಪಾಠ ಮಾಡಲಾಗುತ್ತದೆ, ಆದರೆ ಹೊರಗಡೆಯ ಅಭಿವೃದ್ಧಿಯೂ ಅಗತ್ಯವಿದ್ದು, ಕ್ರೀಡೆಯಲ್ಲಿ ಶಿಕ್ಷಣ, ಮನರಂಜನೆ, ಅಭಿವೃದ್ಧಿ ಎಲ್ಲವೂ ಸಿಗುತ್ತದೆ ಎಂದು ಪಾನೀರ್ ಚರ್ಚ್‍ನ ಧರ್ಮಗುರು ವಂದನೀಯ ಫಾ.ಡೆನ್ನಿಸ್ ಸುವಾರಿಸ್ ಅಭಿಪ್ರಾಯಪಟ್ಟರು.
ಪಾನೀರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಪಾನೀರ್ ಚರ್ಚ್ ಮೈದಾನದಲ್ಲಿ ಮಂಗಳವಾರ ನಡೆದ ಉಳ್ಳಾಲ ಬಿ. ಹೋಬಳಿ ಮಟ್ಟದ ಪಾಥಮಿಕ ಶಾಲಾ ಬಾಲಕ-ಬಾಲಕಿಯರ ಖೋ-ಖೋ ಮತ್ತು ವಾಲಿಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ಸೃಷ್ಟಿಸುವ ಅವಶ್ಯಕತೆ ನಮ್ಮ ದೇಶಕ್ಕಿದೆ, ಆ ನಿಟ್ಟಿನಲ್ಲಿ ಎಳವೆಯಲ್ಲೇ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಿದ್ದು, ಕ್ರೀಡಾಕೂಟಗಳ ಸಹಕಾರಿಯಾಗಿದೆ ಎಂದರು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಲ್ಯಾನ್ಸಿ ಡಿಸೋಜ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ರಾವ್, ನೋಡೆಲ್ ಅಧಿಕಾರಿಗಳಾದ ಪುರುಷೋತ್ತಮ, ಪ್ರಮೋದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಮೋಹನ್ ಶಿರ್ಲಾಲ್, ರಾಜೀವ ನಾಯ್ಕ್, ಪ್ರೌಢಶಾಲಾ ವಿಭಾಗದ ನೋಡೆಲ್ ಅಧಿಕಾರಿ ಲೋಕನಾಥ ರೈ, ಪಿಲಾರ್ ಕ್ಲಸ್ಟರ್ ಸಿಆರ್‍ಪಿ ಕವಿತಾ, ಡಿ. ದರ್ಜೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮೊದಲಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೀನಾ ಸ್ವಾಗತಿಸಿದರು. ಜಯಂತಿ ಕುಮಾರಿ ವಂದಿಸಿದರು. ಶಿಕ್ಷಕಿ ಲೂಸಿ ಮರ್ಲಿನ್ ಮಿರಾಂದ ಹಾಗೂ ಹಳೆ ವಿದ್ಯಾರ್ಥಿನಿ ಅಶ್ವಿನಿ ಲೂವೀಸ್ ಕಾರ್ಯಕ್ರಮ ನಿರೂಪಿಸಿದರು.