Site icon Ullalavani

ದರ್ಗಾ ಅಧೀನದ ಎಲ್ಲಾ ಮದರಸಾಗಳಲ್ಲೂ ಸ್ಮಾರ್ಟ್ ಕ್ಲಾಸ್

UN NETWORKS

ಉಳ್ಳಾಲ: ಆಧುನಿತೆಗೆ ತಕ್ಕಂತೆ ಬದಲಾವಣೆಗಳೂ ಅಗತ್ಯ, ಶಾಲೆಯಲ್ಲಿ ನೀಡುವ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತಿದ್ದು ಅದೇ ಮಾದರಿಯ ಶಿಕ್ಷಣ ಮದರಸಾ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಮದರಸಾಗಳಲ್ಲೂ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು.

ಕೇಂದ್ರ ಜುಮಾ ಮಸೀದಿಯ ದ್ಸಿಕ್ರ್ ಸಭಾಂಗಣದಲ್ಲಿ ಮಂಗಳವಾರ ಮದರಸಾಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಧಾರ್ಮಿಕ ಶಿಕ್ಷಣ ಬಲಗೊಂಡರೆ ಧರ್ಮವೂ ಬಲಗೊಳ್ಳುತ್ತದೆ, ಇಂದು ಕುರ್‍ಆನ್‍ಗಳು ಭಾಷಾಂತರಗೊಂಡ ಕಾರಣ ವಿದೇಶಗಳಲ್ಲಿ ಇಸ್ಲಾಂ ಸ್ವೀಕರಿಸುವವರು ಹೆಚ್ಚಾಗಿದ್ದಾರೆ.

ನಮ್ಮಲ್ಲಿನ ವೈಮನಸ್ಸಿನಿಂದಾಗಿ ಇಸ್ಲಾಮಿಕ್ ಕಾನೂನುಗಳು ಕೈತಪ್ಪುತ್ತಿವೆ. ಕ್ಷುಲ್ಲಕ ವಿಚಾರಗಳಲ್ಲಿ ಪರಸ್ಪ ಹೊಡೆದಾಡುವ ಬದಲು ಒಗ್ಗಟ್ಟಿನಿಂದ ಬರುವ ಸಮಸ್ಯೆಗಳನ್ನು ಎದುರಿಸಬೇಕಿದೆ. ಬಡಮಕ್ಕಳಿಗೆ ಮದರಸಾದಲ್ಲಿ ಆಧುನಿಕ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದ್ದು, ಮುಂದೆ ಎಲ್ಲಾ ಮದರಸಾಗಳಿಗೆ ವಿಸ್ತರಿಸಲಾಗುವುದು, ಇದಕ್ಕೆ ಜಮಾಅತಿನ ಸರ್ವರೂ ಒಗ್ಗಟ್ಟಿನಿಂದ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಮದರಸಾಗಳ ಮುಫತ್ತಿಸ್ ಸುಲೈಮಾನ್ ಸಖಾಫಿ ಮಾತನಾಡಿ, 1ರಿಂದ 7ನೇ ತರಗತಿವರೆಗೆ ಮದರಸಾದಲ್ಲಿ ಸಮಗ್ರ ಇಸ್ಲಾಮಿಕ್ ಶಿಕ್ಷಣ ನೀಡಲಾಗುತ್ತಿದ್ದು ಬಳಿಕ ಪ್ಲಸ್ ಟು ವರೆಗೆ ಮುಂದುವರಿಸಲಾಗುತ್ತಿದೆ. ಆದರೂ ಇಂದು ಮಕ್ಕಳಿಗೆ ಇದು ಸಾಕಾಗುತ್ತಿಲ್ಲ ಎನ್ನುವ ಸ್ಥಿತಿ ಪರಿಶೀಲನೆ ವೇಳೆ ಕಂಡು ಬಂದಿದೆ. ಮಕ್ಕಳಲ್ಲಿ ಕಲಿಯಲು ಉತ್ಸಾಹ ಮೂಡಿಸುವ ಸಲುವಾಗಿ ಆರಂಬಿಸಲಾಗಿರುವ ಸ್ಮಾರ್ಟ್ ಕ್ಲಾಸ್ ಪ್ರಯೋಜನವಾಗು ನಿರೀಕ್ಷೆ ಇದೆ ಎಂದರು.

ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ ದುವಾ ನೆರವೇರಿಸಿದರು. ಸ್ಮಾರ್ಟ್ ಕ್ಲಾಸ್ ಆಧ್ಯಾಪಕ ಅಬ್ದುಲ್ ಸಲಾಂ ಮದನಿ ಅಳಿಕೆ, ದಾರುಲ್ ಕಾಲೇಜು ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಮೋರಲ್ ಅಕಾಡೆಮಿ ಅಧ್ಯಾಪಕ ಸಿದ್ದೀಕ್ ಅಹ್ಸನಿ, ದರ್ಗಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಕಾರ್ಯದರ್ಶಿ ನೌಷಾದ್, ಚಾರಿಟೇಬಲ್ ಟ್ರಸ್ಟ್ ಉಪಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಸದಸ್ಯರಾದ ಮಹಮ್ಮದ್ ಅಕ್ಕರೆಕೆರೆ, ಆಲಿಮೋನು ಅಲೇಕಳ, ಅಶ್ರಫ್ ಮುಕಚ್ಚೇರಿ ಮೊದಲಾವರು ಭಾಗವಹಿಸಿದ್ದರು.

Exit mobile version