UN NETWORKS
ಉಳ್ಳಾಲ : ಭಾರತ ಬಹು ಸಂಸ್ಕೃತಿಯನ್ನು ಹೊಂದಿರುವ ಕೃಷಿ ಪರಂಪರೆ ಇಂತಹ ದೇಶವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರುವ ಮೂಲಕ ದೇಶದಲ್ಲಿ ರುಷಿ ಪರಂಪರೆಯನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಜನಪರ ಚಿಂತಕಿ ಹಾಗೂ ಬರಹಗಾರ್ತಿ ಕೆ. ನೀಲಾ ಅಭಿಪ್ರಾಯಪಟ್ಟರು.
ಭಾರತದ ಆನಾದಿ ಕಾಲದಿಂದಲೂ ಕೃಷಿ ಆಧಾರಿತ ದೇಶವಾಗಿದೆ. ಜಗದ ಜೀವರಾಶಿಗೆ ಅನ್ನ ನೀಡುವ ಕೃಷಿ ಸಂಸ್ಕೃತಿಯನ್ನು ಮೋದಿ ನೇತೃತ್ವದಲ್ಲಿ ಅದಾನಿ ಅಂಬಾನಿಗಳು ಕೂತು ತಿನ್ನುವ ರುಷಿ ಪರಂಪರೆಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ದೇಶದ ಕೃಷಿ ಭೂಮಿಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಪರಭಾರೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಯುವಜನತೆ ಹಣಕ್ಕಾಗಿ ತಪ್ಪು ದಾರಿಗಳನ್ನು ಹುಡುಕುತ್ತಿದ್ದಾರೆ. ಕೇಂದ್ರ ಸರಕಾರದ ಸರ್ವೇಯಂತೆ ದೇಶದಲ್ಲಿ ಶೇ. 71ರಷ್ಟು ಜನರ ದೈನಂದಿನ ಆದಾಯ 20 ರೂ.ಗಿಂತ ಕಡಿಮೆಯಾಗಿದೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಉತ್ತೇನ ಎಂದು ಯುವಕರ ಮತವನ್ನು ಸೆಳೆದಿದ್ದ ಮೋದಿ ನೇತೃತ್ವದ ಕೇಂದ್ರ ಸರಕಾರ ಆಡಳಿತಕ್ಕೆ ಬಂದ ಮೂರು ವರ್ಷದಲ್ಲಿ ಸುಮಾರು 70 ಲಕ್ಗಷದಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವುದು ಕಟುಕ ಸರಕಾರಗಳು. ಇಂದು ಆಡಳಿತ ನಡೆಸುತ್ತಿರುವವರು ದೇಶಭಕ್ತಿಯ ಬಗ್ಗೆ ಪಾಠ ಮಾಡುವ ಮೂಲಕ ಬಹು ಸಂಸ್ಕೃತಿಯ ದೇಶವನ್ನು ಒಡೆಯುವ ಮೂಲಕ ದೇಶ ಭಕ್ತಿಯ ಹುಸಿ ನಾಟಕವಾಡುತ್ತಿದ್ದಾರೆ. ಆದರೆ ಇವರ ಪಕ್ಷದ ಹಿರಿಯರು ಒಬ್ಬರೇ ಒಬ್ಬರು ಸ್ವಾತಂತ್ರ ಚಳವಳಿಯಲ್ಲಿ ಬಲಿದಾನ ಮಾಡಿಲ್ಲ. ದೇಶದಲ್ಲಿ ಇಂದು ನಡೆಯುತ್ತಿರುವ ಅಲ್ಪಸಂಖ್ಯಾತ ಕೋಮುವಾದ ಮತ್ತು ಬಹು ಸಂಖ್ಯಾತ ಕೋಮುವಾದ ದೇಶಕ್ಕೆ ಬಹು ದೊಡ್ಡ ಅಪಾಯದ ಗಂಟೆಯಾಗಿದ್ದು, ಇದನ್ನು ಮೀರಿ ಭಾರತದಲ್ಲಿ ಬಹು ಸಂಸ್ಕೃತಿಯನ್ನು ಗಟ್ಟಿಗೊಳಿಸುವ ತಾಕತ್ತು ಇಂದಿನ ಯುವ ಸಮುದಾಯದಲ್ಲಿದ್ದು ಇಂತಹವರ ವಿರುದ್ಧ ಯುವಜನತೆ ಒಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದರು.
ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಆರ್ಥಿಕ ನೀತಿಯಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಇದರ ವಿರುದ್ಧ ಯುವ ಜನತೆ ಹೋರಾಟ ನಡೆಸಬೇಕಾಗಿದೆ . ಜಿಲ್ಲೆಯಲ್ಲಿ ಸೌಹಾರ್ಧ ಹಿಂದಿನಿಂದಲೂ ಇದೆ. ತುಳುನಾಡಿನಲ್ಲಿ ಹುಟ್ಟಿರುವ ಎಲ್ಲಾ ಮುಸ್ಲಿಮರಾಗಲಿ ಕ್ರೈಸ್ತರಾಗಲಿ ಏಳೆಂಟು ತಲೆಮಾರಿನಲ್ಲಿ ತುಳುವರೇ ಆಗಿದ್ದರು. ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಅಣ್ಣ ತಮ್ಮಂದಿರು ಆದರೆ ಅಧಿಕಾರದಲ್ಲಿರುವವರು ತಮ್ಮ ಸ್ವಾರ್ಥ ಸಾಧನೆಗಾಗಿ ಸೌಹಾರ್ಧತೆಯನ್ನು ಕೆಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದರಲ್ಲೂ ನಿರುದ್ಯೋಗಿ ಯುವಕರು ಒಗ್ಗಟ್ಟಾಗಿ ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಾರೆ ಎನ್ನುವ ನಿಟ್ಟಿನಲ್ಲಿ ಆಡಳಿತ ಶಾಹಿಗಳು ದೇಶಪ್ರೇಮದ ಹೆಸರಿನಲ್ಲಿ ಧರ್ಮದ ಆಧಾರದಲ್ಲಿ ಯುವಕರನ್ನು ಸಂಘಟಿಸಿ ಗಲಭೆ ನಡೆಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಯುವಜನತೆಯನ್ನು ಉತ್ತಮ ದಾರಿಗೆ ತರುವ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯಾವುದೇ ಜನಪ್ರತಿನಿಧಿಗಳು ಚಿಂತನೆ ನಡೆಸುತ್ತಿಲ್ಲ ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಗಂಗಾಧರ್ ಉಳ್ಳಾಲ್, ಡಿವೈಎಫ್‍ಐ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಕೋಶಾಧಿಕಾರಿ ರಫೀಕ್ ಹರೇಕಳ, ಎಸ್‍ಎಫ್‍ಐ ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್, ಡಿವೈಎಫ್ ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ವಲಯ ಸಮಿತಿ ಉಪಾಧ್ಯಕ್ಷರಾದ ರೋಹಿದಾಸ್ ಭಟ್ನಗರ, ಹರೀಶ್ ಕೆರೆಬೈಲ್ ಉಪಸ್ಥಿತರಿದ್ದರು.
ಸಮ್ಮೇಳನ ಪೂರ್ವ ಭಾವಿಯಾಗಿ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆ ಬಳಿಯಿಂದ ಸಮ್ಮೇಳನ ನಡೆಯುವ ಮುನ್ನೂರು ಯುವಕ ಮಂಡಲದ ಸಭಾಭವನದವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ ನಡೆಯಿತು.
ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಜೊತೆ ಕಾರ್ಯದರ್ಶಿ ಸುನಿಲ್ ತೇವುಲ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು ನಿರೂಪಿಸಿದರು. ಅಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ ವಂದಿಸಿದರು.