Site icon Ullalavani

ಯೆನೆಪೋಯ: ಎಂಟು ಕಾರುಗಳ ಹುಡಿಗೈದ ದುಷ್ಕರ್ಮಿಗಳು

UN NETWORKS

ಯೆನೆಪೋಯ: ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಬಳಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಂಟು ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳ ಗುಂಪೊಂದು ಪುಡಿಗೈದಿರುವ ಘಟನೆ ಶನಿವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಕಾರೊಳಗಡೆ ಕುಳಿತಿದ್ದ ರೋಗಿ ಸಂಬಂಧಿಯೋರ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಘಾಲಿಬ್ ಹುಸೈನ್ ಎಂಬವರು ಗಾಯಗೊಂಡಿದ್ದಾರೆ. ಯೆನೆಪೋಯ ಆಸ್ಪತ್ರೆ ವಠಾರದಲ್ಲಿ ವಾಹನಗಳು ನಿಲ್ಲಿಸಲು ಸ್ಥಳಾವಕಾಶ ಇಲ್ಲದಿರುವುದರಿಂದ ಸಮೀಪದಲ್ಲೇ ಖಾಸಗಿ ಸ್ಥಳವನ್ನು ಬಾಡಿಗೆಗೆ ಪಡೆಯಲಾಗಿದೆ. ಶನಿವಾರ ತಡರಾತ್ರಿ 2 ರಿಂದ 3 ರವೇಳೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿಡಲಾಗಿದ್ದ, ಕಾರಿನ ಬಳಿ ಮುಖಕ್ಕೆ ಬಟ್ಟೆ ಕಟ್ಟಿದ್ದ ಸ್ಥಿತಿಯಲ್ಲಿ ಬಂದ ದುಷ್ಕರ್ಮಿಗಳ ತಂಡ ಎಂಟು ಕಾರುಗಳ ಗಾಜುಗಳನ್ನು ಪುಡಿಗೈದಿರುವುದಲ್ಲದೆ, ವಾಹನಗಳಿಗೂ ಹಾನಿ ಮಾಡಿದೆ. ಈ ಸಂದರ್ಭ ಕಾರೊಳಗಡೆ ಮಲಗಿದ್ದ ರೋಗಿಯೋರ್ವರ ಸಂಬಂಧಿಕರು ಗಾಜು ತಗಲಿ ಗಾಯಗೊಂಡಿದ್ದಾರೆ. ಐದು ಕಾರುಗಳು ರೋಗಿಗಳ ಸಂಬಂಧಿಕರಿಗೆ ಸೇರಿದಲ್ಲಿ, ಇನ್ನು ಮೂರು ಕಾರುಗಳು ಆಸ್ಪತ್ರೆ ವೈದ್ಯರುಗಳಿಗೆ ಸೇರಿದ್ದಾಗಿದೆ. ಈ ಕುರಿತು ಅನೆಸ್ತೀಷಿಯಾ ವಿಭಾಗದ ಡಾ.ಶೈನಾ ಹಾಗೂ ಡಾ.ಅನಾ ಜೆಸಿಕಾ ಮರಿಯಂ ಹಾಗೂ ಗಾಯಾಳು ಘಲೀಬ್ ಹುಸೈನ್ ಎಂಬವರು ದೂರು ದಾಖಲಿಸಿದ್ದಾರೆ.

ಆಸ್ಪತ್ರೆ ಕೇಂದ್ರೀಕರಿಸಿ ಕೃತ್ಯ : ಯೆನೆಪೋಯ ಆಸ್ಪತ್ರೆ ಮದನಿ ನಗರ ಎಂಬ ಪ್ರದೇಶದ ಸಮೀಪವಿದ್ದು, ಇದು ಸೂಕ್ಷ್ಮ ಪ್ರದೇಶವಾಗಿದೆ. ದುಷ್ಕರ್ಮಿ ತಂಡವೊಂದು ಬಡ ರೋಗಿಗಳನ್ನು ಹಾಗೂ ಅವರ ಸಂಬಂಧಿಕರಿಗೆ ಆಸ್ಪತ್ರೆ ಸೇವೆಗಳನ್ನು ಪರಿಚಯಿಸುವುದಾಗಿ ತಿಳಿಸಿ ವಂಚಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಹಣ ಗಳಿಸುವ ಹಾಗೂ ಆಸ್ಪತ್ರೆಗೆ ತೊಂದರೆಯನ್ನುಂಟು ಮಾಡುವ ಉದ್ದೇಶದಿಂದ ಕೃತ್ಯ ಎಸಗುತ್ತಿದೆ. ರಾತ್ರಿ ವೇಳೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆತರುವ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ತಂಡ ಈ ವೇಳೆಯೂ ಆಸ್ಪತ್ರೆ ವಠಾರದಲ್ಲಿ ಅಶಾಂತಿಯನ್ನು ಉಂಟು ಮಾಡಲು ಕಾರಣವಾಗುತ್ತಿದೆ. ಘಟನೆ ಕುರಿತು ಸ್ಥಳೀಯ ಸಚಿವರಾದ ಯು.ಟಿ. ಖಾದರ್ ಅವರ ಗಮನಕ್ಕೂ ತರಲಾಗಿದೆ. ಪೊಲೀಸ್ ಬಂದೋಬಸ್ತ್ ಇದ್ದರೂ, ಆಸ್ಪತ್ರೆಗೆ ದಿನನಿತ್ಯ ಸಾವಿರಾರು ರೋಗಿಗಳು ಬರುವ ಹಿನ್ನೆಲೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ನೀಡಬೇಕು ಅನ್ನುವ ಒತ್ತಾಯವನ್ನು ಯೆನೆಪೋಯ ಆಸ್ಪತ್ರೆಯ ಸೆಕ್ಯುರಿಟಿ ವಿಭಾಗ ಮಾಡಿದೆ.

Exit mobile version