Site icon Ullalavani

ಸೌಹಾರ್ದತೆಗೆ ಸಾಕ್ಷಿಯಾದ ಮೊಂಟೆಪದವು ಮೊಸರುಕುಡಿಕೆ ಉತ್ಸವ

UN NETWORKS

ಮೊಂಟೆಪದವು: ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಮುಡಿಪು ಸಮೀಪದ ಮೊಂಟೆಪದವಿನಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಗೆ ಮುಸ್ಲಿಮರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

ಕೋಮುಸೂಕ್ಷ್ಮ ಪ್ರದೇಶ ಉಳ್ಳಾಲ ಹಾಗೂ ಮುಡಿಪುವಿನಲ್ಲಿ  ಇಂತಹ  ಸುಸಂದರ್ಭಗಳು ಮರುಕಳಿಸುತ್ತಿರುವುದರಿಂದ ಜನರಲ್ಲಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತಿದೆ.  ಶ್ರೀ ಶಾರದಾಂಬ ಭಜನಾ ಮಂದಿರ ಮೊಂಟೆಪದವು  ಇವರು ಆಚರಿಸಿದಂತಹ ಶ್ರೀ ಕೃಷ್ಣ ಜನಮಾಷ್ಟಮಿ ಉತ್ಸವದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ  ಮೊಂಟೆಪದವಿನ ಮಠದಿಂದ  ಭಜನಾ ಮಂದಿರಕ್ಕೆ ಶೋಭಾಯಾತ್ರೆ ನಡೆದಿತ್ತು. ಇದರಲ್ಲಿ  ಭಾಗವಹಿಸಿದ್ದ  ನೂರಕ್ಕೂ ಅಧಿಕ ಹಿಂದು ಬಾಂಧವರಿಗೆ, ಮೊಂಟೆಪದವು ಜಂಕ್ಷನ್ನಿನಲ್ಲಿ  ಮುಸ್ಲಿಂ ಬಾಂಧವರು ಸಿಹಿತಿಂಡಿ ಜತೆಗೆ  ತಂಪು ಪಾನೀಯ ವಿತರಿಸಿದರು. ಶೋಭಾಯಾತ್ರೆಯಲ್ಲಿ  ಭಾಗವಹಿಸಿ ದನಿದ ಹಿಂದು ಬಾಂಧವರಿಗೆ  ತಂಪು ಪಾನೀಯ ಬಹಳ ಸಹಕಾರಿಯಾಯಿತು. ಈ ಹಿಂದೆ  ಮುಸ್ಲಿಂ ಸಮುದಾಯದ ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ  ಮೋಂಟುಗೋಳಿ ಪ್ರದೇಶದಲ್ಲಿ  ಹಿಂದು ಬಾಂಧವರು ಸಿಹಿತಿಂಡಿಯನ್ನು ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಂದಿಗೆ ವಿತರಿಸಿದ್ದರು.  ಎರಡು ಸಮುದಾಯದ ಅನ್ಯೋನ್ಯತೆಯೂ ಇಡೀ ಜಿಲ್ಲೆಯಲ್ಲಿ ಹದಗೆಡುತ್ತಿರುವ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮಾದರಿಯಾಗಲಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಹಿಂದೆ  ಶ್ರೀ ಉಳ್ಳಾಲ್ತಿ  ಧರ್ಮ ಅರಸರ ದೇವಸ್ಥಾನದಲ್ಲಿ ನಡೆದಿದ್ದ  ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಧರ್ಮ ನಡಾವಳಿ ಮಹೋತ್ಸವದ ಸಂದರ್ಭದಲ್ಲಿ ಉಳ್ಳಾಲದ ಮುಸ್ಲಿಂ  ಬಾಂಧವರು ಹಿಂದುಗಳಿಗೆ ಸಿಹಿತಿಂಡಿ,  ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ಸಂದರ್ಭ ಸಮಾಜದಲ್ಲಿ ಕೋಮುಗಲಭೆಗಳಿಗೆ ಪ್ರಚೋದಿಸುವಂತಹ ಸನ್ನಿವೇಶಗಳೇ ಎದುರಾಗುತ್ತಿವೆ. ಯುವಸಮುದಾಯ ಕೂಡ ಅದರ ಹಿಂದೆಯೇ ಸಾಗಿ ಸಮಾಜದ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಈ ನಡುವೆ ಸೌಹಾರ್ದತೆಯನ್ನು ಉಳಿಸುವ ಸಲುವಾಗಿ ನಡೆದಂತಹ ಕಾರ್ಯಕ್ರಮವಾಗಿದ್ದು,  ಮುಸ್ಲಿಂ ಸಮುದಾಯ  ಹಿಂದುಗಳ ಜತೆಗಿನ  ಹಿಂದಿನ ಬಾಂಧವ್ಯವನ್ನು ಉಳಿಸಬೇಕು, ಶಾಂತಿ, ಸಹಬಾಳ್ವೆಯನ್ನು  ನಡೆಸಬೇಕು ಅನ್ನುವ ಸಂದೇಶ  ಇಂತಹ ಕಾರ್ಯಕ್ರಮಗಳಿಂದ ಆಗುತ್ತದೆ.

ರಝಾಕ್ ಮೊಂಟೆಪದವು
ಸ್ಥಳೀಯರು

Exit mobile version