Site icon Ullalavani

ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

UN Networks

ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪ್ರಥಮ ವಾರ್ಷಿಕೋತ್ಸವ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳೂರು, ಬ್ಲಡ್ ಹೆಲ್ಪ್ ಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಆಹಾರ ಸಚಿವ ಯುಟಿ ಖಾದರ್ ಹೇಳಿದರು.

ಅವರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ನಗರದ ಫೋರಂ ಫಿಝಾ ಮಾಲ್‍ನಲ್ಲಿ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನ್ನದಾನ, ಶಿಕ್ಷಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಬೇಕು ಎಂದು ಸಚಿವ ಖಾದರ್ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರೋ. ಪಟ್ಟಾಭಿರಾಮ ಸೋಮಯಾಜಿ ರಕ್ತದಾನ ಮಾಡುವ ಸಂದರ್ಭ ಹಲವು ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹಾಗಾಗಿ ರಕ್ತದಾನ ಮಾಡಲು ಆಸ್ಪತ್ರೆಗೆ ತೆರಳುವ ಸಂದರ್ಭ ಯಾವುದೇ ತೊಡಕುಗಳು ಆಗದಂತೆ ಸರಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ. ಅದಕ್ಕಾಗಿ ಸಂಘದ ಆಯ್ದ ಸಕ್ರಿಯ ರಕ್ತದಾನಿಗಳಿಗೆ ಸರಕಾರದ ಗುರುತಿನ ಚೀಟಿ ಅಗತ್ಯವಿದೆ ಎಂದು ಸಲಹೆ ನೀಡಿದರು.

ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೊ, ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ ದಾರಿಮಿ, ಮಾಜಿ ಮೇಯರ್ ಕೆ. ಅಶ್ರಫ್ ಶುಭ ಹಾರೈಸಿದರು.

ನಂಡೊ ಪೆಂಙಲ್ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ಎ.ಎಚ್. ನೌಷದ್ ಹಾಜಿ ಸುರಲ್ಪಾಡಿ, ಸುಹೈಲ್ ಕಂದಕ್, ನವಾಝ್ ಉಳ್ಳಾಲ್, ಯೂಸುಫ್ ಉಳಾಯಿಬೆಟ್ಟು, ಶರೀಫ್ ಉಳಾಯಿಬೆಟ್ಟು, ರಫೀಕ್ ಮಾಸ್ಟರ್, ರಾಝಿಕ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಬ್ಲಡ್ ಹೆಲ್ಪ್ ಲೈನ್‍ನ ಎಡ್ಮಿನ್‍ಗಳಾದ ಇಫ್ತಿಕಾರ್ ಕೃಷ್ಣಾಪುರ, ಮುಸ್ತಫಾ ಅಡ್ಡೂರು ದೆಮ್ಮಲೆ, ಇಮ್ರಾನ್ ಅಡ್ಡೂರು, ಮುಝಮ್ಮಿಲ್ ನೂಯಿ ಅಡ್ಡೂರು, ಫಯಾಝ್ ಅಲಿ ದೆಮ್ಮೆಲೆ ಕಾರ್ಯಕ್ರಮ ಸಂಘಟಿಸಿದ್ದರು.

ಈ ಸಂದರ್ಭ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ ಮುಹಮ್ಮದ್ ಆಲಿ ಕಮ್ಮರಡಿ, ಉದ್ಯಮಿ ಝಕಾರಿಯಾ ಜೋಕಟ್ಟೆ, ಅಕ್ಷರ ಸಂತ ಹರೇಕಳ ಹಾಜಬ್ಬ, ಸಂಚಾರಿ ನಿಯಂತ್ರಕ ರವೂಫ್ ಅವರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ ಸಚಿವ ಯು.ಟಿ.ಖಾದರ್ ಸಹಿತ 130 ಮಂದಿ ರಕ್ತದಾನಗೈದರು. ಬ್ಯಾರಿ ಝುಲ್ಫಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೊತೆಗೆ ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Exit mobile version