Site icon Ullalavani

ಗಿಡಗಳನ್ನು ಮಗುವಿನಂತೆ ಕಾಣಿರಿ: ರವೀಂದ್ರ ಶೆಟ್ಟಿ

UN Networks

ಉಳ್ಳಾಲ: ಪ್ರತಿಯೊಬ್ಬರೂ ಗಿಡಗಳನ್ನು ಮಗುವಿನಂತೆ ನೋಡಿಕೊಂಡಾಗ ನಾವು ನೆಟ್ಟ ಗಿಡ ಮರವಾಗಿ ಪರಿಸರ ರಕ್ಷಣೆಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದು ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.

ಅಲೇಕಳ ಮದನಿ ಪ್ರೌಢಶಾಲೆಯ ಮದನಿ ಇಕೋ ಕ್ಲಬ್ ವತಿಯಿಂದ ದೇರಳಕಟ್ಟೆ ರೋಟರಿ ಕ್ಲಬ್ ಸಹಕಾರದಲ್ಲಿ ಶನಿವಾರ ಶಾಲೆಯ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಬದುಕಿಗಾಗಿ ಸಸ್ಯ ಸಂಪತ್ತು ನಾಶ ಮಾಡುವುದರಿಂದ ಮಾನವನ ಆರೋಗ್ಯದಲ್ಲೂ ಏರುಪೇರು ಸಂಭವಿಸುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾಗಬೇಕಿದ್ದು, ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಗೋಗ್ರೀನ್ ಯೋಜನೆಯಡಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಾವಿರ ಗಿಡಗಳನ್ನು ವಿತರಿಸಲಿದೆ ಎಂದರು.

ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಟಿ.ಇಸ್ಮಾಯಿಲ್ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯೂ ಮನೆಯ ಆವರಣದಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸ ಇಂದಿನಿಂದಲೇ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಯು.ಎನ್.ಇಬ್ರಾಹಿಂ, ಉಪಾಧ್ಯಕ್ಷ ಯು.ಎ.ಖಾಸಿಂ, ಸಮಿತಿ ಸದಸ್ಯರಾದ ಅಹ್ಮದ್ ಬಾವ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷ ವಿಕ್ರಂ ದತ್ತ, ಪಿ.ಡಿ.ಶೆಟ್ಟಿ, ಕೌನ್ಸಿಲರ್ ಯು.ಎ.ಇಸ್ಮಾಯಿಲ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀರಾ ಜೆ ಇನ್ನಿತರರು ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಇಬ್ರಾಹಿಂ ಪಿ. ವಂದಿಸಿದರು. ಶಿಕ್ಷಕ ದೇವಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version