UN Networks
ಕೊಣಾಜೆ: ವಿದೇಶಗಳಲ್ಲಿರುವಂತೆ ದೇಶದ ಪೊಲೀಸ್ ಇಲಾಖೆಗಳಲ್ಲಿಯೂ ಸುಧಾರಿತ ವ್ಯವಸ್ಥೆ ಜಾರಿಯಾಗಬೇಕಿದ್ದು, ಇದರಿಂದ ಪೊಲೀಸರು ಸಮಯ ಪಾಲನೆಯ ಜತೆಗೆ ಕರ್ತವ್ಯಗಳಲ್ಲಿಯೂ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಅಭಿಪ್ರಾಯಪಟ್ಟರು.
ದೇಶದ ಪೊಲೀಸ್ ವ್ಯವಸ್ಥೆಯಡಿ ಸರಿಯಾದ ಅನುಕೂಲತೆಗಳನ್ನು ಹಾಗೂ ತಾಂತ್ರಿಕ ಜ್ಞಾನವನ್ನು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದೆ, ಡಿಸಿಪಿ ಮೇಲ್ಮಟ್ಟಕ್ಕೆ ಉತ್ತಮ ವ್ಯವಸ್ಥೆಯಿದ್ದರೂ, ಅವರಿಂದ ಕೆಳ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ದೊರೆಯುತ್ತಿಲ್ಲ. ವಿದೇಶಗಳಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಹೋಲಿಸಿದರೆ ದೇಶದಲ್ಲಿನ ವ್ಯವಸ್ಥೆ ಬಹಳ ಕುಂಠಿತವಾಗಿದೆ. ಇದನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮವಹಿಸಬೇಕಿದೆ ಎಂದರು.
ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಮಾತನಾಡಿ ` ಕೇಂದ್ರ ಸರಕಾರದ ಯೋಜನೆಯಂತೆ ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿ.ಸಿ.ಟಿವಿಯನ್ನು ಅಳವಡಿಸುವ ಭರವಸೆ ಸಿಕ್ಕಿದೆ. ಈಗಾಗಲೇ ಇಲಾಖೆಯಿಂದ ಕ್ಯಾಮರಾ ಅಳವಡಿಸುವ ಪ್ರದೇಶಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು. ಸಾರ್ವಜನಿಕ ಹಿತಾಸಕ್ತಿಯಿಂದ ಖಾಸಗಿ ಸಂಸ್ಥೆಗಳು ಆಯಾಯ ಪ್ರದೇಶಕ್ಕೆ ಸಿಸಿಟಿವಿಯನ್ನು ಅಳವಡಿಸುವಂತೆ ಇಲಾಖೆಯ ವತಿಯಿಂದ ಮನವಿ ಮಾಡಲಾಗುವುದು. ಮಂಗಳೂರಿಗೆ ಟಿಕೆಟ್ ಪಡೆದರೂ ಪಂಪ್ ವೆಲ್ ನಲ್ಲಿ ಇಳಿಸುತ್ತಾರೆ, ಬಿ.ಸಿ.ರೋಡಿಗೆ ಟಿಕೇಟ್ ಪಡೆದರೂ ಮುಡಿಪುವಿನಲ್ಲಿ ಇಳಿಸಿ ಬೇರೆ ಬಸ್ಸುಗಳಿಗೆ ಪ್ರಯಾಣಿಕರನ್ನು ಕಳುಹಿಸುತ್ತಾರೆ ಎಂಬ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಅಧಿಕಾರಿ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಗಾಂಜಾ ವ್ಯಸನಿಗಳ ಕುರಿತು ರಾಜಕೀಯ ಹಸ್ತಕ್ಷೇಪವೇ ಮಾಡಿಲ್ಲ. ಅಂತಹ ಉದಾಹರಣೆಗಳಿದ್ದಲ್ಲಿ ಸಭೆಯಲ್ಲಿ ತಿಳಿಸಬಹುದು ಎಂದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೇಳಿ ಬಂದ ದೂರುಗಳು :
ರಸ್ತೆ ಬದಿಗಳಲ್ಲಿ ತ್ಯಾಜ್ಯಗಳನ್ನು ಎಸೆದು ಪರಿಸರವನ್ನು ಮಾಲಿನ್ಯಗೊಳಿಸುತ್ತಿರುವ ಪ್ರಕರಣಗಳು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನಡೆಯುತ್ತಿದೆ. ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿದೆ ಎಂದು ಮಂಜನಾಡಿ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ದೊಡ್ಡಮನೆ ಹೇಳಿದರು.
ಖಾಸಗಿ ಬಸ್ಸು ಸಿಬ್ಬಂದಿ ಹಿರಿಯರು, ಮಕ್ಕಳನ್ನು ಸೇರಿದಂತೆ ಪ್ರಯಾಣಿಕರ ಜತೆಗೆ ಅತಿರೇಕವಾಗಿ ವರ್ತಿಸುತ್ತಾರೆ. ಸಾರ್ವಜನಿಕವಾಗಿಯೇ ಚಿಲ್ಲರೆ ಇಲ್ಲದೇ ಇದ್ದಲ್ಲಿ, ಇಳಿಯಲು ತಡವಾದಲ್ಲಿ ಅಶ್ಲೀಲವಾಗಿ ನಿಂದಿಸುತ್ತಾರೆ, ಇದು ತೀರಾ ಮುಜುಗರವನ್ನುಂಟು ಮಾಡುತ್ತಿದೆ. ಈ ಕುರಿತು ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೊಣಾಜೆ ಪಂಚಾಯಿತಿ ಸದಸ್ಯ ಅಚ್ಚುತ್ತ ಗಟ್ಟಿ ದೂರಿದರು.
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಇನ್ಫೋಸಿಸ್, ಮೂರು ಖಾಸಗಿ ಆಸ್ಪತ್ರೆಗಳು ತಲೆ ಎತ್ತು ನಿಂತಿವೆ. ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳ ಪ್ರಮಾಣವೂ ಹೆಚ್ಚಾಗುತ್ತಿವೆ. ಅಪರಾಧಿಗಳು ಇಂದಿನ ತಾಂತ್ರಿಕತೆಯ ಕಾರುಗಳಲ್ಲಿ ಪಲಾಯನಗೈದರೆ, ಪೊಲೀಸರು ಅದೇ ಹಳೇಯ ಜೀಪಿನಲ್ಲಿ ಹಿಂಬಾಲಿಸಿ ಅವರನ್ನು ಹಿಡಿಯಲು ಸಾಧ್ಯವೇ?. ಅದಕ್ಕಾಗಿ ಸರಕಾರದಿಂದ ಅನುಕೂಲತೆಗಳನ್ನು ಪೂರೈಸಲು ಸಾಧ್ಯವಾಗದೇ ಇದ್ದರೂ, ಠಾಣಾ ವ್ಯಾಪ್ತಿಯಲ್ಲಿರುವ ಸಂಸ್ಥೆಗಳಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹೆದ್ದಾರಿ ಪಕ್ಕದಲ್ಲಿ ಸಿಸಿಟಿವಿಯನ್ನು ನೀಡುವಂತೆಯೂ ಹಾಗೂ ಪೊಲೀಸರಿಗೆ ಉತ್ತಮ ವಾಹನವನ್ನು ಒದಗಿಸುವ ಕುರಿತು ಇಲಾಖೆಯಿಂದಲೇ ಮನವಿ ಮಾಡಬೇಕಿದೆ. ಇದರಿಂದ ಅಪರಾಧ ಕೃತ್ಯಗಳನ್ನು ಕಡಿಮೆಗೊಳಿಸಬಹುದು ಎಂದು ನರಿಂಗಾನದ ನಂದಕುಮಾರ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾದಕ ದ್ರವ್ಯ ಪ್ರಕರಣಗಳಲ್ಲಿ ಬಂಧಿತರಾಗುವವರನ್ನು ರಾಜಕೀಯ ಪ್ರಭಾವ ಬಳಸಿ ಬಿಡುಗಡೆಗೊಳಿಸಲಾಗುತ್ತಿದೆ. ಇದರಿಂದ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು ಎಂದು ಇಸ್ಮಾಯಿಲ್ ಎಂಬವರು ತಿಳಿಸಿದರು.
ನಾಟೆಕಲ್ ನಿಂದ ಕುತ್ತಾರಿನವರೆಗೆ ಬಸ್ಸುಗಳು ನಿಲ್ದಾಣಗಳಲ್ಲಿ ನಿಲ್ಲದೆ ರಸ್ತೆಯಲ್ಲೇ ನಿಲ್ಲುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ರಾತ್ರಿ ಹೊತ್ತಿನಲ್ಲಿ ನಾಲ್ಕು ಚಕ್ರ ವಾಹನ ಸವಾರರು ಒಂದು ದೀಪದಲ್ಲಿ ವಾಹನ ಚಲಾಯಿಸುತ್ತಾರೆ. ಹಲವು ವಾಹನಗಳಲ್ಲಿ ಇಂಡಿಕೇಟರ್ ಗಳು ಇಲ್ಲದೆ ಅಪಘಾತಗಳು ನಡೆಯುತ್ತಿವೆ. ಇದರ ಬಗ್ಗೆ ಗಮನವಹಿಸಬೇಕು ಎಂದು ಸುದರ್ಶನ್ ಭಟ್ ಹೇಳಿದರು.
ಅಸೈಗೋಳಿ, ಕೊಣಾಜೆ ವ್ಯಾಪ್ತಿಯಲ್ಲಿ ವಾಹನಗಳ ಅತಿವೇಗದ ಚಾಲನೆಯಿಂದ ಹಲವು ಅಪಘಾತಗಳು ನಡೆದಿವೆ. ಒಂದು ವರ್ಷದ ಅವಧಿಯಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರಸ್ತೆಗಳಲ್ಲಿ ಉಬ್ಬುಗಳನ್ನು ರಚಿಸಬೇಕಿದೆ ಎಂದು ಕೊಣಾಜೆ ಪಂಚಾಯಿತಿ ಸದಸ್ಯ ಗಣೇಶ್ ಆರೋಪಿಸಿದರು.
ಮುಡಿಪು ಮಂಗಳೂರು ಚಲಿಸುವ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಂಗಳೂರಿಗೆ ಟಿಕೆಟ್ ಪಡೆದಲ್ಲಿ ಕಂಕನಾಡಿಯಲ್ಲಿ, ಬಿ.ಸಿ.ರೋಡಿಗೆ ಟಿಕೆಟ್ ನೀಡಿದರೂ ಮುಡಿಪುವಿನಲ್ಲಿ ಇಳಿಸಿ ಬೇರೆ ಬಸ್ಸುಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈ ಹಿಂದೆ ಇಂತಹ ಸಮಸ್ಯೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದು ಸರಕಾರಿ ಬಸ್ಸಿಗೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟಿಸಿದ ಫಲವಾಗಿ ಕೆಲ ಸರಕಾರಿ ಬಸ್ಸುಗಳು ಜಾರಿಯಾಗಿದೆ. ಸಮಸ್ಯೆ ಮುಂದುವರಿದಲ್ಲಿ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಮುಡಿಪು ನಿವಾಸಿ ಜಗದೀಶ್ ಎಂಬವರು ದೂರಿದರು.
ಠಾಣಾಧಿಕಾರಿ ಅಶೋಕ್ ಮಾತನಾಡಿ 12 ಗ್ರಾಮಗಳಲ್ಲಿ 42 ಬೀಟ್ ಗಳನ್ನು ರಚಿಸಲಾಗಿದೆ. ಗ್ರಾಮಸ್ಥರು ಯಾವುದೇ ಸಮಸ್ಯೆ ಅಥವಾ ಮಾಹಿತಿಯಿದ್ದಲ್ಲಿ ಪ್ರದೇಶಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲಿ ತಿಳಿಸಬಹುದು. ಈ ಮೂಲಕ ಅಪರಾಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ಈ ಸಂದರ್ಭ ಎಸ್.ಐ ಸುಕುಮಾರನ್ ಉಪಸ್ಥಿತರಿದ್ದರು.
ಠಾಣಾ ಸಿಬ್ಬಂದಿ ಸುಖಲತಾ ನಿರೂಪಿಸಿದರು. ಪ್ರೊಬೆಷನರಿ ಎಸ್.ಐ ಗುರುವಪ್ಪ ಸಾಂತ ಸ್ವಾಗತಿಸಿದರು.