ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮವು ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಜರಗಿತು. ಉಳ್ಳಾಲದಲ್ಲಿ ಪ್ರಸಕ್ತ ಪಠ್ಯಪುಸ್ತಕದಿಂದುಂಟಾಗಿರುವ ಗೊಂದಲದಿಂದಾಗಿ ಮದ್ರಸ ಪ್ರಾರಂಭವಾಗಿ 25 ದಿನ ಕಳೆದಿದ್ದರೂ, ಇನ್ನೂ ಪಠ್ಯ ಶುರುವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಹೆತ್ತವರು ದಿನನಿತ್ಯ ಮದ್ರಸಕ್ಕೆ ಅಗಮಿಸುತ್ತಿದ್ದು, ಗೊಂದಲ ಮುಕ್ತ ಮಾಡಬೇಕಾದವರು ನಮ್ಮ ಹೆತ್ತವರನ್ನು ಮಾನಹಾನಿಯಾಗುವಂತೆ ಅಪಹಾಸ್ಯ ಮಾಡುವುದು, ನಮ್ಮ ಉಸ್ತಾದರುಗಳನ್ನು ಹೆಸರೆತ್ತಿ ಕರೆಯುವುದು ನಮಗೆ ಅತೀವ ದು:ಖವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆತ್ತವರ ಕುರಿತು ನಿಂದಿನಾತ್ಮಕ ಸಂದೇಶಗಳನ್ನ ಹರಿಯ ಬಿಡುವುದನ್ನು ಕಾನೂನು ಪಾಲಕರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ನಿಂದನಾತ್ಮಕ ಧ್ವನಿ ಸಂದೇಶ ಹರಿಯಬಿಟ್ಟವರ ವಿರುಧ್ಧ ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕು. ಆಡಳಿತ ಸಮಿತಿ ಮತ್ತು ನಮ್ಮ ಹೆತ್ತವರ ನಡುವೆ ತರ್ಕ ತಾರಕ್ಕೇರುತ್ತಿದ್ದು, ದಿನನಿತ್ಯ ನಾವು ಮದ್ರಸಗಳಲ್ಲಿ ಬೊಬ್ಬೆ, ಗಲಾಟೆಗಳನ್ನು ನೋಡಬೇಕಾಗಿದೆ.
ಉಳ್ಳಾಲದ ಮದರಸಾಗಳಲ್ಲಿ ಸುಮಾರು 120ಕ್ಕೂ ಹೆಚ್ಚು ಶಿಕ್ಷಕರು ಕಡಿಮೆ ಸಂಬಳದಲ್ಲಿ ಬೋಧಿಸುತ್ತದ್ದು ಇವರಿಗೆ ಯಾವುದೇ ಪಿ.ಎಫ್ ನೀಡಲಾಗುತ್ತಿಲ್ಲ ಮತ್ತು ಮಾಸಿಕ ಸಂಬಳವು ಬಹಳ ತಡವಾಗಿ ಉಸ್ತಾದರುಗಳ ಕೈಸೇರುತ್ತಿರುವುದು ಅವರ ಕುಟುಂಬಕ್ಕೆ ಹೊರೆಯಾಗಿ ಪರಿಣಮಿಸಿದೆ, ಇದನ್ನು ರಾಜ್ಯ ಸರಕಾರ ಮತ್ತು ವಕ್ಷ್ ಇಲಾಖೆ ಗಮನಿಸಬೇಕು. ಈ ಎಲ್ಲಾ ವಿವಾದಗಳನ್ನು ಅತ್ಯಂತ ಶಾಂತ ರೀತಿಯಲ್ಲಿ ನಮ್ಮ ಖಾಝಿ ಫಝಲ್ ಕೋಯಮ್ಮ ತಂಙಳ್‍ರವರ ಉಪಸ್ಥಿತಿಯಲ್ಲಿ ಪರಿಹರಿಸಬೇಕೆಂದು ಸಭೆಯು 10 ಅಂಶಗಳ ನಿರ್ಣಯ ಕೈಗೊಂಡಿತು. ಮುಹಮ್ಮದ್ ಅಸ್ಲಂ ಸಭೆಯ ಕಾರ್ಯಸೂಚಿ ಮಂಡಿಸಿದರು.
ಮುಝಮ್ಮಿಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಜಾಬಿರ್ ಫಾಳಿಲಿ ಒಂಭತ್ತುಕೆರೆ ನಶೀದ್ ಪಠಿಸಿದರು. ವಿದ್ಯಾರ್ಥಿ ನಾಯಕ ಮುಹಮ್ಮದ್ ಇಸ್ಮಾಯೀಲ್ ಸ್ವಾಗತಿಸಿ, ಆಸಿಮ್ ಅಲಿ ನಿರೂಪಿಸಿದರು.