ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಸಂಸ್ಕೃತಿ ಅವನತಿಯತ್ತ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಕೃಷಿ ಕಾರ್ಯಕ್ಕೆ ಆನೆಬಲ ನೀಡುವ ಕಾರ್ಯ ಪ್ರಾರಂಭಗೊಂಡಿದೆ. ಹಿಂದೆ ಕೆಸರುಗದ್ದೆಯಲ್ಲಿ ಪಾಲ್ಗೊಳ್ಳುತ್ತಿದ್ದ ವಿದ್ಯಾರ್ಥಿಗಳು ಇಂದು ಕೈಯಲ್ಲಿ ನೇಜಿ ಹಿಡಿದು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಮೇಶ್ವರದ ಗ್ರಾಮದ ಪಿಲಾರ್ ಪ್ರದೇಶದ ಕೃಷಿಕರಿಗೆ ಇದೀಗ ಕುಂಪಲದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.
ಕುಂಪಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಎರಡು ವಾರಗಳಿಂದ ಗದ್ದೆಗಿಳಿದಿದ್ದಾರೆ. ಕೈಯಲ್ಲಿ ನೇಜಿ ಹಿಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಡಿಲು ಬಿದ್ದ ಗದ್ದೆಯೆಡೆಗೆ ಪ್ರತೀ ಶನಿವಾರ ತೆರಳಿ ಕೃಷಿ ಪಾಠ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಹಿರಿಯ ಕೃಷಿಕರ ಮಾರ್ಗದರ್ಶನ ಶಾಲಾ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್ ಮತ್ತು ಕೇಸರಿ ಮಿತ್ರವೃಂದದ ಸ್ಥಾಪಕಾಧ್ಯಕ್ಷ ನಾರಾಯಣ ಬಿ. ಕುಂಪಲ ನೇತೃತ್ವದಲ್ಲಿ ಕಳೆದ ಶನಿವಾರ ದೇವೇಶ್ ಸರಳಾಯ ಅವರ ಗದ್ದೆಯ ನಾಟಿ ಕಾರ್ಯ ಮುಗಿಸಿದರೆ. ಶನಿವಾರ ಪಿಲಾರ್‍ನ ರಾಮಚಂದ್ರ ಮತ್ತು ದೇವದಾಸ್ ಅವರ ಗದ್ದೆಯಲ್ಲಿ ನಾಟಿ ಕಾರ್ಯವನ್ನು ಮುಗಿಸಿದರು.
ಎರಡನೇ ವರ್ಷದ ಕೃಷಿ ಕಾರ್ಯ : ಕಳೆದ ವರ್ಷ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ನೇಜಿ ನಾಟಿಯಿಂದ ಹಿಡಿದು ಕೊಯ್ಲುವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳೊಂದಿಗೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಭತ್ತದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಟಿಯಿಂದ ಕೊಯ್ಲುವರೆಗೆ ಕೃಷಿ ಕಾರ್ಯ : ಈ ಬಾರಿ ಒಟ್ಟು ಮೂರು ಶನಿವಾರ ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದು ಒಂದು ಏಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಕೃಷಿ ಕಾರ್ಯ ನಡೆಸಲಿದ್ದಾರೆ. ಈಗಾಗಲೇ ಮೂರು ಕೃಷಿಕರ ನಾಟಿ ಕಾರ್ಯವನ್ನು ಮುಗಿಸಿದ್ದು, ನೇಜಿ ನಾಟಿಯಿಂದ ಹಿಡಿದು ನೇಜಿ ತೆಗೆಯುವ ಕಾರ್ಯ ಉಳುಮೆ ಸೇರಿದಂತೆ ಭತ್ತದ ಕೃಷಿಯ ಅನುಭವವನ್ನು ಪಡೆಯುತ್ತಿದ್ದಾರೆ.
ಹಂತ ಹಂತವಾಗಿ ರಸಗೊಬ್ಬರ ಹಾಕುವ ವಿಧಾನ ಮತ್ತು ಭತ್ತ ಕೊಯ್ಲು, ಫಸಲು ಬಂದ ನಂತರ ಭತ್ತ ಬೇರ್ಪಡಿಸುವ ಕಾರ್ಯದಲ್ಲಿ.ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳಲ್ಲಿ ಭತ್ತದ ಕೃಷಿಯ ಬಗ್ಗೆ ಜಾಗೃತಿ ಮತ್ತು ಅಕ್ಕಿಯ ಮಹತ್ವದ ಪಾಠವನ್ನು ನೀಡುವ ಮೂಲಕ ಕೇವಲ ಪಠ್ಯಕ್ಕೆ ಮಾತ್ರ ಅಲ್ಲ ಪಠ್ಯೇತರ ಚಟುವಟಿಕೆಯಲ್ಲಿಯೂ ವಿದ್ಯಾರ್ಥಿಗಳು ಕಡಿಮೆಯೇನಿಲ್ಲ ಎನ್ನುವುದಕ್ಕೆ ಕುಂಪಲ ಶಾಲೆಯ ವಿದ್ಯಾರ್ಥಿಗಳು ಕೃಷಿ ಕಾರ್ಯ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.
* ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕೃತಿ ಪರಿಚಯ ನೀಡುವ ಉದ್ಧೇಶದಿಂದ ಭತ್ತದ ಕೃಷಿಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನ್ನದ ಮಹತ್ವ ಮತ್ತು ಜಾಗೃತಿ ಮೂಡಿಸುವುದರೊಂದಿಗೆ ಕೃಷಿಯೊಂದಿಗೆ ಆಟವಾಡುವ ಮೂಲಕ ಪರಿಸರ ಕಾಳಜಿಯ ಪಾಠ ನೀಡುವ ಮುಖ್ಯ ಉದ್ಧೇಶವನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಿ. ನಾರಾಯಣ ಕುಂಪಲ
ಸ್ಥಾಪಕಾಧ್ಯಕ್ಷ, ಕೇಸರಿ ಮಿತ್ರವೃಂದ ಕುಂಪಲ
*ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿ ಕಾರ್ಯವನ್ನು ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳನ್ನು ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಇದರಿಂದ ಕೃಷಿಕರಿಗೂ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಕೃಷಿ ಕಾರ್ಯದ ಅನುಭವ ದೊರೆಯುತ್ತದೆ. ಪ್ರತೀ ವರ್ಷವೂ ಹಡಿಲು ಗದ್ದೆಯಲ್ಲಿ ವಿದ್ಯಾರ್ಥಿಗಳು ಕೃಷಿ ಕಾರ್ಯ ನಡೆಸಲಿದ್ದಾರೆ.
ವಿಶ್ವನಾಥ್
ಮುಖ್ಯ ಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ
* ಅಕ್ಕಿ ಹೇಗೆ ಆಗುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಈಗ ಭತ್ತದ ಕೃಷಿಯಿಂದ ಅಕ್ಕಿ ಮಾಡಲು ಕೃಷಿಕರು ಎಷ್ಟು ಕಷ್ಟ ಪಡುತ್ತಾರೆ ಎನ್ನುವ ವಿಚಾರ ತಿಳಿಯಿತು. ನಾವು ಊಟ ಮಾಡುವ ಪ್ರತೀ ಅನ್ನದಲ್ಲೂ ಕೃಷಿಕರ ಪರಿಶ್ರಮವಿದೆ. ನಾವು ಎಷ್ಟು ಬೇಕೋ ಅಷ್ಟೇ ಅನ್ನವನ್ನು ತೆಗೆದುಕೊಂಡು ಚೆಲ್ಲದಂತೆ ಎಚ್ಚರ ವಹಿಸಬೇಕಾಗಿದೆ.
ರಚನ್
ಪ್ರೌಢಶಾಲಾ ವಿದ್ಯಾರ್ಥಿ