Site icon Ullalavani

ಕೊಲ್ಯದಲ್ಲಿ ಆಟಿಡೊಂಜಿ ದಿನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಲ್ಯ : ಆಟಿ ತಿಂಗಳ ವಿಶೇಷತೆ ಬಗ್ಗೆ ಕೇವಲ ಮಹಿಳಾ ಮಂಡಲಗಳಿಗೆ ಸೀಮಿತವಾಗದೆ ಇಂದಿನ ಯುವ ಪೀಳಿಗೆಗೆ ಹಿಂದಿನ ಕಾಲದ ಕಷ್ಟಕರ ಜೀವನ ಸೇರಿದಂತೆ ನಮ್ಮ ಸಂಸ್ಕ್ರತಿ, ಆಚಾರ ವಿಚಾರಗಳನ್ನು ತಿಳಿ ಹೇಳುವ ಕಾರ್ಯ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಳ್ಳುವ ಕಾರ್ಯ ಆಗಬೇಕು ಎಂದು ಸೋಮೇಶ್ವರ ಪರಿಜ್ಞಾನ ಪದವಿಪುರ್ವ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಯತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ನಾರಾಯಣ ಗುರು ಮಹಿಳಾ ಸಂಘ ಮತ್ತು ಬಿಲ್ಲವ ಸೇವಾ ಸಮಾಜ ಹಾಗೂ ಯುವ ವಾಹಿನಿ ಘಟಕ ಇದರ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಆನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ಬರುವ ರೋಗ ರುಜಿನಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಬಗೆಯ ಪೃಕೃತಿಯಲ್ಲಿ ಸುಗುವ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದರು, ಇದರ ಬಗ್ಗೆ ಮಕ್ಕಳು ಅರಿತುಕೊಳ್ಳುವುದರೊಂದಿಗೆ ಒಂದೊಂದು ಬಗೆಯ ಖಾದ್ಯವನ್ನು ಮಕ್ಕಳಿಂದಲೇ ತಯಾರಿಸಲು  ಪ್ರೋತ್ಸಾಹ ನೀಡಿದರೆ ಮಕ್ಕಳಿಗೆ ನಮ್ಮ ಸಂಸ್ಕ್ರತಿ, ಆಹಾರ ಪದ್ಧತಿಯ ಅರಿವು ಮೂಡಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರ್ವಾದ ಕೆನರಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಮೋಹನ್‍ದಾಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಸೇವಾ ಸಮಾಜ ಕೊಲ್ಯ ಇದರ ಅಧ್ಯಕ್ಷ ಈಶ್ವರ್ ಸುವರ್ಣ, ಯುವ ವಾಹಿನಿ ಘಟಕ ಕೊಲ್ಯ ಇದರ ಅಧ್ಯಕ್ಷ ಸುರೇಶ್ ಬಿ. ಭಾಗವಹಿಸಿದ್ದರು.

ಶ್ರೀ ನಾರಾಯಣ ಗುರು ಮಹಿಳಾ ಸಂಘದ ಅಧ್ಯಕ್ಷೆ ಹೇಮಲತಾ ಎಸ್. ಕರ್ಕೇರ ಸ್ವಾಗತಿಸಿದರು. ಕಸ್ತೂರಿ ವೇಣುಗೋಪಾಲ್ ಆಟಿಯ ಮಹತ್ವ ತಿಳಿಸಿದರು. ನಾಗವೇಣಿ ವಂದಿಸಿದರು. ಪ್ರಿಯಾಂಕ ಕಾರ್ಯಕ್ರಮ ನಿರ್ವಹಿಸಿದರು.

Exit mobile version