Site icon Ullalavani

ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ವಿದೇಶಿ ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿವಿಯ ಕ್ಯಾಂಪಸ್‍ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಹಾಸ್ಟೆಲ್ ನಿರ್ಮಾಣವಾಗುತ್ತಿದ್ದು ಅದರಲ್ಲಿ ಸ್ಟುಡಿಯೋ ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಅಡುಗೆ ಕೋಣೆ ಸೇರಿದಂತೆ ಸುಸಜ್ಜಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದರು.

ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಶನಿವಾರ ನಡೆದ ಮಂಗಳೂರು ವಿವಿಯಲ್ಲಿ ವ್ಯಾಸಂಗಗೈಯುತ್ತಿರುವ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಗಳೂರು ವಿವಿಗೆ ಈಗಾಗಲೇ ಐಸಿಸಿಆರ್ 100ವಿದ್ಯಾರ್ಥಿಗಳನ್ನುಕೊಟ್ಟಿದ್ದು ನೇರವಾಗಿ 40ಆರ್ಜಿಗಳು ಬಂದಿದ್ದು 30ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಕೆಲವು ವಿದ್ಯಾರ್ಥಿಗಳು ವೀಸಾಕ್ಕೆ ಕಾಯುತ್ತಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳುಳ್ಳ ಖಾಸಗಿ ವಸತಿ ಸಂಕೀರ್ಣದಲ್ಲೂ ವ್ಯವಸ್ಥೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ವಿವಿಧ ದೇಶಗಳ 220ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 500ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಗುರಿ ಹೊಂದಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಐಸಿಸಿಆರ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ವೇಣುಗೋಪಾಲ್ ಮಾತನಾಡಿ ಪದವಿ ಎಂಬುದು ನಮ್ಮ ಶೈಕ್ಷಣಿಕ ಜೀವನದ ಅಂತಿಮಘಟ್ಟವಲ್ಲ. ಯಾವುದೇ ಕ್ಷೇತ್ರದಲ್ಲಿ ಉದ್ದೇಶಿತ ಗುರಿಯೊಂದಿಗೆ ಸಾಧನೆಯೂ ಇದ್ದರೆ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬಹುದು ಎಂದು ನುಡಿದರು.

ಸಮರಂಭದಲ್ಲಿ ನೇಪಾಳ, ಅಫಘಾನಿಸ್ತಾನ, ಸಿರಿಯಾ, ಶ್ರೀಲಂಕಾ, ಈಜಿಪ್ಟ್, ತಝಕಿಸ್ತಾನ, ಹಂಗೇರಿ, ಬುರುಂಡಿ, ಇಂಡೋನೇಶಿಯಾ, ತಾಂಝಾನಿಯಾ ಹಾಗೂ ವಿಯೆಟ್ನಾಂನ ಒಟ್ಟು 33ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಮಂಗಳೂರು ವಿವಿ ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರದ ನಿರ್ದೇಶಕ ಪೆÇ್ರ. ರವಿಶಂಕರ್ ರಾವ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಕಾರ್ಯಕ್ರಮ ನಿರೂಪಿಸಿದರು. ವಿವಿ ಪರೀಕ್ಷಾಂಗ ಕುಲಸಚಿವ ಡಾ. ಎ.ಎಂ. ಖಾನ್ ವಂದಿಸಿದರು.
ಕಾರ್ಯಕ್ರಮದ ಬಳಿಕ ವಿದೇಶಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

Exit mobile version