ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಬೆಳ್ಮ: ನಿರ್ಮಲ ಗ್ರಾಮ ಪುರಸ್ಕಾರ, ಸ್ವಚ್ಛ ಗ್ರಾಮ ಪುರಸ್ಕಾರ ಪಡೆದಿರುವ ಬೆಳ್ಮ ಗ್ರಾಮ ಪಂಚಾಯಿತಿನಲ್ಲೇ ಸ್ವಚ್ಛತೆಯೇ ಇಲ್ಲವಾಗಿದೆ. ದೇರಳಕಟ್ಟೆ ಜಂಕ್ಷನ್ ಸುತ್ತಮುತ್ತ ತ್ಯಾಜ್ಯ ಕಾಣುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಅನಾರೋಗ್ಯ ಉಂಟಾಗುವ ಭೀತಿಯಿದೆ. ಆರೋಗ್ಯ ಇಲಾಖೆಯೂ ಈ ಕುರಿತು ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪ ದೇರಳಕಟ್ಟೆಯ ಬೆಳ್ಮ ಪಂಚಾಯಿತಿ ವಠಾರದದಲ್ಲಿ ಮಂಗಳವಾರ ಜರಗಿದ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದಿತು.
ಬೆಳ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸರಕಾರಿ ಜಾಗಗಳಿವೆ. ಅದನ್ನು ಕಂದಾಯ ಇಲಾಖೆ ಹುಡುಕಿ ಪಂಚಾಯಿತಿ ಗಮನಕ್ಕೆ ತರಬೇಕಿದೆ ಅನ್ನುವ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂತು.
ಪಶು ಸಂಗೋಪನಾ ಇಲಾಖೆಯಿಂದ ಸರಿಯಾದ ಸ್ಪಂಧನೆ ದೊರೆಯುತ್ತಿಲ್ಲ. ಫೋನಾಯಿಸಿದಾಗ ಮಂಗಳೂರಿನಲ್ಲಿದ್ದೇನೆ ಅನ್ನುವ ಪ್ರತಿಕ್ರಿಯೆ ದೊರೆಯುತ್ತಿದೆ. ಇದರಿಂದ ಅನಾರೋಗ್ಯಕ್ಕೀಡಾದ ಜಾನುವಾರುಗಳು ಸತತುಬಿದ್ದಿರುವುದರಿಂದ ಲಕ್ಷಾಂತರ ನಷ್ಟ ಉಂಟಾಗಿದೆ ಅನ್ನುವ ಆರೋಪವನ್ನು ಗ್ರಾಮಸ್ಥರೋರ್ವರು ಮಾಡಿದರು.
ನಾಲ್ಕು ಬೀಟ್ ಗಳಲ್ಲಿ ಇಲಾಖೆ ಕಾರ್ಯಾಚರಣೆ :
ಬೆಳ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪರಾಧಗಳನ್ನು ಹತ್ತಿಕ್ಕಲು ಕಮೀಷನರ್ ಅವರ ಆದೇಶದಂತೆ 4 ಬೀಟ್‍ಗಳನ್ನು ರಚಿಸಲಾಗಿದೆ. ನಿತ್ಯಾನಂದನಗರ, ದೇರಳಕಟ್ಟೆ, ಬೆಳ್ಮ, ನಾಟೆಕಲ್ ವ್ಯಾಪ್ತಿಗಳಲ್ಲಿ ನಾಲ್ಕು ಬೀಟ್‍ಗಳಂತೆ ಪೊಲೀಸರ ತಂಡ ಕಾರ್ಯಾಚರಿಸಲಿದೆ. ಆಯಾಯ ಬೀಟ್‍ನಲ್ಲಿ 50 ಮಂದಿ ಮಾಹಿತಿದಾರರಿದ್ದು, ಅವರನ್ನು ಸಾಮಾಜಿಕ ಜಾಲ ತಾಣ ಹಾಗೂ ಸಭೆಗಳನ್ನು ನಡೆಸಿ ಮಾಹಿತಿ ನೀಡುವ ಕುರಿತು ತಿಳಿಹೇಳಲಾಗಿದೆ. ಆಯಾಯ ಪ್ರದೇಶದ ಮಂದಿ ಪೊಲೀಸರಿಗೆ ಮಾಹಿತಿ ನೀಡುವುದರ ಮುಖೇನ ಅಪರಾಧಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕೊಣಾಜೆ ಪೊಲೀಸ್ ಠಾಣೆ ಸಿಬ್ಬಂದಿ ಭಾಸ್ಕರ್ ಮಾಹಿತಿ ನೀಡಿದರು.
ಆಧಾರ್ ಕಾರ್ಡು ನೋಂದಾವಣೆ ಹಾಗೂ ಅದರಲ್ಲಿನ ಲೋಪದೋಷಗಳಿಗೆ ಸರಿಯಾದ ಸ್ಪಂಧನೆ ದೊರೆಯುತ್ತಿಲ್ಲ. ಆಧಾರ್ ಕಾರ್ಡು ಲಿಂಕಿಂಗ್ ಮಾಡಲು ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿಯಿದೆ ಎಂಬ ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಬೆಳ್ಮ ಪಂಚಾಯಿತಿನಲ್ಲೂ ಆಧಾರ್ ಕೇಂದ್ರವನ್ನು ತೆರೆಯಲಾಗುವುದು ಎಂದರು.
ತಾ.ಪಂ.ನ ಸಿಬ್ಬಂದಿ ಲೋಕನಾಥ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್, ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ಕಾನೆಕೆರೆಯಲ್ಲಿ ರಸ್ತೆಗೆ 45,300 ರೂ. Sರ್ಚಾಗಿದೆ ಅನ್ನುವ ಲೆಕ್ಕವನ್ನು ಸಭೆಯಲ್ಲಿ ನೀಡಲಾಗಿದೆ. ಆದರೆ ಕಳೆದ ಮೂರು ಗ್ರಾಮಸಭೆಯಲ್ಲು ರಸ್ತೆ ಅವ್ಯವಸ್ಥೆಯ ಕುರಿತು ಹೇಳುತ್ತಲೇ ಬಂದಿದ್ದೇನೆ. ಅಲ್ಲಿ ಖರ್ಚಾಗಿರುವಷ್ಟು ಕೆಲಸವೇ ಆಗಿಲ್ಲ. ಹೋಗಲು ಸಾಧ್ಯವಾಗುತ್ತಿಲ್ಲ. ಅಷ್ಟೂ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದಲ್ಲಿ, ಉತ್ತಮವಾಗುತಿತ್ತು. ಕೂಡಲೇ ಗುತ್ತಿಗೆದಾರರ ಮೇಲೆ ಕ್ರಮಕೈಗೊಂಡು ಜನಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಬೇಕು.
-ಪುಷ್ಪಾ
ಗ್ರಾಮಸ್ಥೆ