ಉಳ್ಳಾಲ:ಟೆಂಪೋ ಚಾಲಕನಿಗೆ ಕಾರಿನಲ್ಲಿ ಬಂದ ನಾಲ್ವರು ಆಗಂತುಕರ ತಂಡ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಝಾದ್ ನಗರದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಉಳ್ಳಾಲ ಉಳಿಯ ನಿವಾಸಿ ಲಾರೆನ್ಸ್ ಎಂಬವರ ಪುತ್ರ ಆಸ್ಟಿನ್ (28) ಚೂರಿ ಇರಿತಕ್ಕೊಳಗಾದವರು. ಗೂಡ್ಸ್ ಟೆಂಪೋ ಚಾಲಕರಾಗಿದ್ದ ಇವರು ಟೆಂಪೋದಲ್ಲಿ ಮಣ್ಣು ಹೇರಿಕೊಂಡು ಆಝಾದ್ ನಗರದತ್ತ ಕೊಂಡೊಯ್ದಿದ್ದರು. ಅಲ್ಲಿ ಮಾರ್ಗ ಮಧ್ಯೆ ಟೆಂಪೋದಿಂದ ಮಣ್ಣು ಖಾಲಿ ಮಾಡುವ ಸಂದರ್ಭ , ಕಪ್ಪು ಬಣ್ಣದ ಫಾರ್ಡ್ ಕಾರಿನಲ್ಲಿ ಬಂದ ನಾಲ್ವರು ಟೆಂಪೋವನ್ನು ಬದಿಗೆ ಇಡುವಂತೆ ಹೇಳಿದ್ದರು. ಆದರೆ ಮಣ್ಣು ಖಾಲಿ ಮಾಡುತ್ತಿದ್ದು, ಮುಗಿದ ತಕ್ಷಣ ಹೋಗುವುದಾಗಿ ಆಸ್ಟಿನ್ ಪ್ರತಿಕ್ರಿಯಿಸಿದ್ದರು. ಇದರಿಂದ ರೊಚ್ಚಿಗೆದ್ದ ತಂಡದಲ್ಲಿದ್ದ ಓರ್ವ ಚೂರಿಯಿಂದ ಆಸ್ಟಿನ್ ಅವರ ಕುತ್ತಿಗೆ ಭಾಗಕ್ಕೆ ಇರಿಯಲು ಯತ್ನಿಸಿದ್ದು, ಅದನ್ನು ತಡೆಯಲು ಕೈ ಅಡ್ಡ ಹಿಡಿದಾಗ ಕೈಗೆ ಚುಚ್ಚಿದ್ದಾರೆ. ಬಳಿಕ ಕಾರಿನಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ದ.ಕ.ಜಿಲ್ಲಾ ಎಸ್.ಪಿ sಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ , ಮಂಗಳೂರು ಡಿಸಿಪಿಗಳಾದ ಕೆ.ಎಂ ಶಾಂತರಾಜು, ಹನುಮಂತರಾಯ, ಎಸಿಪಿ ವೆಲೆಂಟೈನ್ ಡಿಸೋಜ, ಶೃತಿ ಎನ್.ಎಸ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಎಸ್.ಐ ರಾಜೇಂದ್ರ ಸಹಿತ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.