Site icon Ullalavani

ನಿರಕ್ಷೇಪಣಾ ಪತ್ರವನ್ನು ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ : ಕಳೆದ ಒಂದು ವರ್ಷದಿಂದ ಗೂಡಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದೇ ವ್ಯಾಪಾರ ನಡೆಸಲು ಅಸಾಧ್ಯವಾಗದೇ ಈ ಬಗ್ಗೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದ ನಿಟ್ಟಿನಲ್ಲಿ ಅಂಗವಿಕರೋರ್ವರು ತಮ್ಮ ಗೂಡಂಗಡಿಗೆ ನಿರಕ್ಷೇಪಣಾ ಪತ್ರವನ್ನು ನೀಡುವಂತೆ ಒತ್ತಾಯಿಸಿ ಉಳ್ಳಾಲ ನಗರಸಭೆಯ ಎದುರುಗಡೆ ಧರಣಿ ಸತ್ಯಾಗ್ರಹ ಕುಳಿತಿರುವ ಘಟನೆ ಸೋಮವಾರ ನಡೆದಿದೆ.

ಮಹಮ್ಮದ್ ನೂರುಲ್ ಹಕ್ ಎಂಬ ಅಂಗವಿಕಲ ವ್ಯಕ್ತಿಯೋರ್ವರು ಉಳ್ಳಾಲ ಪೊಲೀಸ್ ಠಾಣೆಯ ಸಮೀಪ ಗೂಡಂಗಡಿ ಹೊಂದಿದ್ದು, ಅದಕೆ ವಿದ್ಯುತ್ ಸಂಪರ್ಕ ಒದಗಿಸಲು ನಗರಸಭೆಯಿಂದ ನಿರಾಕ್ಷೇಪಣಾ ಪತ್ರವನ್ನು ಕೇಳಿದ್ದರು.

ಆದರೆ ಒಂದು ವರ್ಷದಿಂದ ರಸ್ತೆ ಅಗಲೀಕರಣ ಸಂದರ್ಭ ಅಂಗಡಿ ತೆರವುಗೊಳಿಸಲಾಗುವುದು ಅನ್ನುವ ಕಾರಣ ನೀಡಿ ಪತ್ರವನ್ನು ನೀಡಿರಲಿಲ್ಲ. ಮೂರು ವರ್ಷದ ಅಂಗವಿಕಲರಿಗಾಗಿ ನೀಡುವ ಶೇ.3ರ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ, ಸಿಗಬೇಕಾದ ರೂ. 6,000 ಸಹಾಯಧನ ಇನ್ನೂ ಕೈ ಸೇರಿಲ್ಲ. ತನ್ನ ಬಳಿಕ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹಣ ಬಂದಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಬಂದಿರುವ ಹಣವನ್ನು ಏನು ಮಾಡಿದ್ದಾರೆ ಅನ್ನುವುದಕ್ಕೆ ಪ್ರತಿಕ್ರಿಯಿಸಬೇಕು, ಅಲ್ಲದೆ ನೂತನವಾಗಿ ತೆರೆದುಕೊಂಡು, ರಸ್ತೆಯ ಮಾರ್ಜಿನ್ ನಲ್ಲೇ ಇರುವಂತಹ ಬೃಹತ್ ವಾಣಿಜ್ಯ ಸಂಕೀರ್ಣಗಳಿಗೆ ನಿರಕ್ಷೇಪಣಾ ಪತ್ರವನ್ನು ನಗರಸಭೆ ನೀಡುತ್ತದೆ. ಅಲ್ಲದೆ ವಾರದ ಹಿಂದೆ ಹೊಸತಾಗಿ ರಚನೆಗೊಂಡ ಬಾರ್ ಗೂ ನಿರಕ್ಷೇಪಣಾ ಪತ್ರವನ್ನು ನೀಡುವ ನಗರಸಭೆ , ಇದೀಗ ಕೆಲಸವಿಲ್ಲದೆ, ವ್ಯಾಪಾರವಿಲ್ಲದೆ ರೋಸಿ ಹೋಗಿರುವ ತನ್ನ ಅಂಗಡಿಗೆ ನಿರಕ್ಷೇಪಣಾ ಪತ್ರ ನೀಡದೇ ಇರುವುದು ಬಡವನ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಆರೋಪಿಸಿರುವ ನೂರುಲ್ ಹಕ್, ಅಂಗಡಿಯಲ್ಲಿ ಫ್ರೇಮ್ ವಕ್ರ್ಸ್, ಮೊಬೈಲ್ ರಿಪೇರಿ ಮಾಡಿಕೊಂಡು ನಾಲ್ಕು ಮಕ್ಕಳು ಹಾಗೂ ಪತ್ನಿಯನ್ನು ಸಲಹುತ್ತಿದ್ದೆ. ಇದೀಗ ವಿದ್ಯುತ್ ಇಲ್ಲದೆ ಅಂಗಡಿ ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೂ ಅನ್ನ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಹಕ್ ತಿಳಿಸಿದ್ದಾರೆ.

ಗೂಡಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದೇ ಕಳೆದ ಒಂದು ವರ್ಷದಿಂದ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಗೂಡಂಗಡಿಯನ್ನು ನಂಬಿಕೊಂಡು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದೇನೆ.ಈ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನನಗೆ ಸರಿಯಾದ ನ್ಯಾಯ ಸಿಗುವರೆಗೂ ಈ ಜಾಗದಿಂದ ಕದಲುವುದಲ್ಲ. ನಾನು ಸತ್ತರೆ ನನ್ನ ಸಾವಿಗೆ ನಗರಸಭೆಯೆ ಹೊಣೆ

ಮಹಮ್ಮದ್ ನೂರುಲ್ ಹಕ್
ನೊಂದ ಅಂಗಡಿ ಮಾಲಿಕ
ಕೋಡಿ ಜುಮಾ ಮಸೀದಿ ಸಮೀಪದ ಮೊಹಮ್ಮದ್ ನೂರುಲ್ ಹಕ್ ಅವರು 2016-17 ನೇ ಸಾಲಿನ ಶೇ.3 ರ ಯೋಜನೆಯಡಿಯಲ್ಲಿ ಪೋಷಣಾ ಭತ್ಯೆಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯನ್ನು 2017ರ ಎ.25ರ ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಣಯ ಸಂಖ್ಯೆ 1481ರಲ್ಲಿ ಭತ್ಯೆ ನೀಡುವ ಬಗ್ಗೆ ಮಂಜೂರಾತಿ ಪಡೆಯಲಾಗಿತ್ತು. 2017-18ನೇ ಸಾಲಿನಲ್ಲಿ ಸರಕಾರದ ಅನುದಾನ ಬಿಡುಗಡೆಗೊಂಡ ನಂತರ ಪಾವತಿಸಲಾಗುವುದು. ಗೂಡಂಗಡಿ ಪಿಡಬ್ಲ್ಯುಡಿ ರಸ್ತೆಯ ಬದಿಯಲ್ಲಿ ಬರುವುದರಿಂದ , ವಿದ್ಯುತ್ ಸಂಪರ್ಕ ನೀಡಲು ಪಿಡಬ್ಲ್ಯುಡಿ ಇಲಾಖೆಯಿಂದ ನಿರಕ್ಷೇಪಣಾ ಪತ್ರದ ಅವಶ್ಯಕತೆ ಇದೆ. ಅಲ್ಲಿಂದ ವಿದ್ಯುತ್ ಸಂಪರ್ಕ ನೀಡಲು ನಿರಾಕ್ಷೇಪಣಾ ಪತ್ರ ತಂದಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಕ್ರಮಕೈಗೊಳ್ಳುವ ಹಿಂಬರಹವನ್ನು ನೀಡಲಾಗಿದೆ.

ವಾಣಿ ಆಳ್ವ
ಪೌರಾಯುಕ್ತರು
ಉಳ್ಳಾಲ ನಗರಸಭೆ

Exit mobile version