Site icon Ullalavani

ಸೋಮೇಶ್ವರ ಗ್ರಾ.ಪಂ ನೂತನ ಸಭಾ ಭವನ ಉದ್ಘಾಟನೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಸೋಮೇಶ್ವರ: 300 ಮನೆಗಳಿಗೆ ಮೂರರಿಂದ ನಾಲ್ಕು ಗ್ರಾ.ಪಂ. ಸದಸ್ಯರಿದ್ದು ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿ ಜನರ ಪ್ರೀತಿ ಗಳಿಸಲು ಐದು ವರ್ಷ ಸಾಕಾಗುತ್ತದೆ, ಆದರೆ ಹೆಚ್ಚಿನವರು ಶಾಸಕರ ಕೆಲಸಕ್ಕೆ ಕೈ ಹಾಕುತ್ತಿರುವುದರಿಂದ ಗ್ರಾ.ಪಂ. ಸದಸ್ಯರ ಕೆಲಸ ಶಾಸಕರು ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಸೋಮೇಶ್ವರ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ನೂತನ ಸಭಾ ಭವನ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎನ್ನುವುದು ಗಾಂಧೀಜಿ ಕನಸಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಆತ್ಮವಿಶ್ವಾಸ, ಸ್ವಾಭಿಮಾನದಿಂದ ಕೆಲಸ ನಿರ್ವಹಿಸುವಂತಾಗಬೇಕು ಎನ್ನುವ ನೆಲೆಯಲ್ಲಿ ಸರ್ಕಾರ ಗೌರವ ಧನ ಹೆಚ್ಚಳ ಜೊತೆ ವಿವಿಧ ಸವಲತ್ತು ನೀಡಿದೆ. ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕವಾಗಿ ಆಡಳಿತ ನಿರ್ವಹಿಸಿದಾಗ ಜನರೂ ಸಹಕಾರ ನೀಡುತ್ತಾರೆ ಎನ್ನುವುದಕ್ಕೆ ಸೋಮೇಶ್ವರ ಗ್ರಾ.ಪಂ. ಸಾಕ್ಷಿ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿದಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮದ ಸರ್ಕಾರ ಗ್ರಾ.ಪಂ. ಆಗಿದ್ದು, ಸರ್ಕಾರದ ಲೆಕ್ಕಾಚಾರದಂತೆ ಕೋಟ್ಯಂತರ ರೂಪಾಯಿ ಆದಾಯ ಹೊಂದಿರುವ ಮೊಬೈಲ್ ಕಂಪನಿಗಳು ಟವರ್‍ವೊಂದಕ್ಕೆ 52 ಸಾವಿರ ಇಲ್ಲವೇ ಕನಿಷ್ಟ 12 ಸಾವಿವನ್ನಾದರೂ ಗ್ರಾ.ಪಂ.ಗೆ ಮಾಸಿಕ ತೆರಿಗೆ ಪಾವತಿಸಬೇಕು. ಟೋಲ್‍ಗೇಟ್‍ಗಳಿದ್ದಲ್ಲಿ ಶೇ.2ರಷ್ಟು ಮಾಸಿಕ ತೆರಿಗೆ ಪಾವತಿಸಬೇಕಿದ್ದರೂ ನಿಯಮ ಪಾಲನೆಯಾಗದ ಕಾರಣ ಗ್ರಾಮ ಪಂಚಾಯಿತಿಗೆ ಆದಾಯ ಕೊರತೆ ಬಂದಿದೆ ಎಂದರು.

ರಮೇಶ್ ಕುಮಾರ್ ವರದಿಯಾಧಾರದಲ್ಲಿ ಗ್ರಾ.ಪಂ.ಗೆ ಅನುದಾನ, ಅಧಿಕಾರಿ, ಆರ್ಥಿಕ ಹಸ್ತಾಂತರ ಆಗಬೇಕಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ 100 ಸೇವೆಗಳಿದ್ದರೂ ಆರ್‍ಟಿಸಿ ಕೊಡುವ ಹಕ್ಕು ಮಾತ್ರ ಗ್ರಾ.ಪಂ.ಗಿದೆ. ಒಂದು ಆರ್‍ಟಿಸಿಗೆ 10 ರೂಪಾಯಿ ಶುಲ್ಕವಿದ್ದು ಅದರಲ್ಲೂ ಏಳು ರೂಪಾಯಿ ಕಂದಾಯ ಇಲಾಖೆಗೆ ಪಾವತಿಸಬೇಕೆನ್ನುವ ಸುತ್ತೋಲೆ ಸರ್ಕಾರ ಹಿಂಪಡೆಯಬೇಕು ಎಂದರು.

ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡ್, ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ರಾಮಚಂದ್ರ ಕುಂಪಲ, ಗ್ರಾ.ಪಂ. ಉಪಾಧ್ಯಕ್ಷೆ ಸುಶೀಲಾ ನಾಯ್ಕ್ ಮುಖ್ಯ ಅತಿಥಿಗಳಾಗಿದ್ದರು. ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಆಳ್ವ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾರ್ಯದರ್ಶಿ ಯಶವಂತ ಅಮೀನ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರ.ಕಾ. ಡಾ.ಕೆ.ಎ.ಮುನೀರ್ ಬಾವ, ಪಂಚಾಯಿತಿ ಪಿಡಿಓ ಡಾ.ಮನೋಹರ್ ನಾ.ಗೌಡ ಮೊದಲಾದವರು ಉಪಸ್ಥಿತರಿದ್ದರು.

ಗ್ರಾ.ಪಂ. ಸಿಬ್ಬಂದಿ ರೂಪಾ ಸ್ವಾಗತಿಸಿದರು. ರೋಹನ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version