ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಗಳೂರು: ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಇವರ ಆರನೇ ವೈದ್ಯಕೀಯ ಕೃತಿ “ಸಂಜೀವಿನಿ ಆರೋಗ್ಯ ಮಾರ್ಗದರ್ಶಿ” ಭಾಗ 2 ಕೃತಿ ಸೋಮವಾರದಂದು ಓಷನ್‍ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಇವರು ಕೃತಿಯನ್ನು ಬಿಡುಗಡೆ ಮಾಡಿದರು.
ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಉಸ್ತುವಾರಿ ಸಚಿವರಾದ ರಮಾನಾಥ ರೈ ವೈದ್ಯಕೀಯ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ ಕಲೆ ಡಾ. ಮುರಲೀಯವರಿಗೆ ಸಿದ್ದಿಸಿದೆ. ಅವರು ಬರೆದ ಎಲ್ಲಾ ಆರೂ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ದೊರಕಿದೆ. ಅವರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಮೆಚ್ಚತಕ್ಕದ್ದು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ರಮಾನಂದ ಬನರಿ ಅವರು ಮಾತನಾಡಿದ “ಸಂಜೀವಿನಿ” ಕೃತಿ, ವೈದ್ಯ ಲೋಕದ ಅಪರೂಪದ ಕೃತಿಯಾಗಿದ್ದು ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಅತೀ ನಿರ್ಣಯಕ ಪಾತ್ರ ವಹಿಸಬಲ್ಲುದು ಎಂದರು. ವೈದ್ಯರ ಮತ್ತು ರೋಗಿಗಳ ನಡುವಿನ ಸಂಬಂಧ ಮೊದಲಿನಂತೆ ಈಗ ಉಳಿದಿಲ್ಲ. ವೈದ್ಯ ಮತ್ತು ರೋಗಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ “ಸಂಜೀವಿನಿ” ಸಹಕಾರಿಯಾಗಬಲ್ಲುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷದ್ ವರ್ಕಾಡಿ ವಹಿಸಿ ಮಾತನಾಡಿದರು.
ಚೂಂತಾರು ಪ್ರತಿಷ್ಠಾನದ ಅಧ್ಯಕ್ಷ ಚೂಂತಾರು ಲಕ್ಷ್ಮೀ ನಾರಾಯಣ ಭಟ್, ಡಾ| ರಾಜಶ್ರೀ ಮೋಹನ್, ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗ್ಗಡೆ, ವೈದ್ಯ ಸಾಹಿತಿ ಡಾ.ಮೀರಾ, ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಚಂದ್ರಪ್ರÀಕಾಶ್ ಶೆಟ್ಟಿ ತುಂಬೆ ಉಪಸ್ಥಿತರಿದ್ದರು.
ರಾಮಕೃಷ್ಣ ಭಟ್ ಚೊಕ್ಕಾಡಿ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಮಹೇಶ್ ಚೂಂತಾರು ಇವರು ವಂದನಾರ್ಪಣೆ ಮಾಡಿದರು.