Site icon Ullalavani

ಪಾನೀರು : ಮಕ್ಕಳಿಗೆ ನೂತನ ಬಟ್ಟೆಗಳ ವಿತರಣಾ ಕಾರ್ಯಕ್ರಮ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಮಕ್ಕಳು ಸಕಾರಾತ್ಮಕ ಗುಣಗಳನ್ನು ಬೆಳೆಸುವುದರ ಜತೆಗೆ  ಗುರಿಯನ್ನು ಹೊಂದಬೇಕಿದೆ.  ಇದರಿಂದ ಭವಿಷ್ಯದಲ್ಲಿ ಉತ್ತಮ ಹೆಜ್ಜೆಯನ್ನು ಇಡಲು ಸಾಧ್ಯ ಎಂದು  ಸಹಾಯಕ ಪೊಲೀಸ್ ಆಯುಕ್ತೆ  ಶೃತಿ.ಎನ್.ಆರ್ ಅಭಿಪ್ರಾಯಪಟ್ಟರು.

ಅವರು  ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ  ಭಾನುವಾರ ದೇರಳಕಟ್ಟೆ  ಪಾನೀರು ದಿ ಮರ್ಸಿ ಅಮ್ಮನವರ ಮಕ್ಕಳ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ನೂತನ ಬಟ್ಟೆಗಳ ವಿತರಣಾ ಕಾರ್ಯಕ್ರಮವಾದ ಪ್ರೀತಿ  ವಂಚಿತ ಕಂದಮ್ಮಗಳಿಗೆ  ವಾತ್ಸಲ್ಯದ ಅಪ್ಪುಗೆ ‘ ಯಲ್ಲಿ ಭಾಗವಹಿಸಿ ಮಾತನಾಡಿದರು.

ಆತ್ಮಶಕ್ತಿ ಇದ್ದಲ್ಲಿ  ಗುರಿ ಸಾಧಿಸಲು ಸಾಧ್ಯವಿದ್ದು,  ಅದನ್ನು ಬೆಳೆಸುವ  ಕಾರ್ಯ ಮಕ್ಕಳಲ್ಲಿ ಆಗಬೇಕಿದೆ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದ್ದು,  ಈ ಮುಖೇನ  ಸಂಬಂಧಿಕರ ಪ್ರೀತಿಯಿಂದ ವಂಚಿತ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯ ಕಾರ್ಯಕ್ರಮದಿಂದ ಆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಅಧ್ಯಕ್ಷ  ಫ್ರಾಂಕ್ಲಿನ್ ಮೊಂತೇರೊ ಮಾತನಾಡಿ  ರಾಷ್ಟ್ರೀಯತೆ ಚಿಂತನೆಯ ಉದ್ದೀಪನ ಆಗುವ ದೃಷ್ಟಿಯಿಂದ  ವೇದಿಕೆಯನ್ನು ಸ್ಥಾಪಿಸಲಾಗಿದೆ. ಸಮಾಜದಲ್ಲಿ ಹೊಂದಾಣಿಕೆ, ಸೌಹಾರ್ದತೆಯ ಭಾವನೆಗಳನ್ನು ಬೆಳೆಸುವ ಕಾರ್ಯ ಆಗಬೇಕಿದೆ. ಇಂತಹ ಉದ್ದೇಶಗಳನ್ನು ಮುಂದಿಟ್ಟುಕೊಂಡು ವೇದಿಕೆ ಕಾರ್ಯಾಚರಿಸುತ್ತಿದೆ. ಹಿಂದೆ ತಾಯಿಯ ಶ್ರವಣದೋಷ ಸರಿಪಡಿಸಲೆಂದು  ಇಟ್ಟಿದ್ದ ಹಣವನ್ನು ಕಳ್ಳರು ಕಳವುಗೈದ ಸಂದರ್ಭ, ಯುವಕನಿಗೆ ಸಹಾಯಧನ ವಿತರಣೆ, ಹಾಗೂ ಮುಂದೆ ಕೆಲ ದಿನಗಳಲ್ಲಿ  ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಕುಟುಂಬದ ಯುವತಿಯ  ಮದುವೆ  ಖರ್ಚನ್ನು  ವೇದಿಕೆ ನೋಡಿಕೊಳ್ಳಲಿದೆ ಎಂದರು.

ದೇರಳಕಟ್ಟೆ ಪಾನೀರು ಮರ್ಸಿ ದಿ ಅಮ್ಮನವರ ಆಶ್ರಮದ ಸಂಚಾಲಕಿ ಭಗಿನಿ ಲೂಸಿಯಾನ , ಅರ್ಸುಲಾಯ್ಕ್ ಪ್ರಾನ್ಸಿಸ್ಕನ್ ಸಂಸ್ಥೆಯ ವಿದ್ಯಾ ಸಂಸ್ಥೆಯ  ಕಾರ್ಯದರ್ಶಿ   ಭಗಿನಿ ಲಿಲ್ಲಿ ಪಿಂಟೋ, ಅನಿಲ್ ಬೋಸ್,  ರೋಶನ್ ಡಿಸೋಜ, ವಲೇರಿಯನ್ ಫೆರ್ನಾಂಡಿಸ್  ಮುಖ್ಯ ಅತಿಥಿಗಳಾಗಿದ್ದರು.

ಭಗಿನಿ ಸರಿತಾ ಡಿಸೋಜ ಸ್ವಾಗತಿಸಿದರು.  ಅಮೃತ್ ಲಾಲ್ ಜೋಯ್ಸ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version